google.com, pub-9939191130407836, DIRECT, f08c47fec0942fa0

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ನಬಾರ್ಡ್ ನಿಂದ ನೀಡಲಾಗುವ ಪುನರ್ಧನ ಸೌಲಭ್ಯದ ನಿಧಿಯನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಆಗ್ರಹಿಸಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಡಿಸಿಸಿ ಬ್ಯಾಂಕ್ ನಿಂದ ಶೂನ್ಯ ಬಡ್ಡಿದರ ಯೋಜನೆಯಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದ್ದು, ರೈತರಿಗೆ ಬೆಳೆ ಸಾಲ ನೀಡುವ ಮಿತಿಯನ್ನು 5 ಲಕ್ಷ ರೂ.ವರೆಗೆ ಹಾಗೂ ಶೇ. 3ರ ಮಧ್ಯಮಾವಧಿ ಸಾಲದ ಮಿತಿಯನ್ನು 15 ಲಕ್ಷ ರೂ.ವರೆಗೆ ರಾಜ್ಯ ಸರ್ಕಾರ ಹೆಚ್ಚಿಸಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ರೈತರು ಶುನ್ಯ ಬಡ್ಡಿದರದಲ್ಲಿ ಮಧ್ಯಾಮವಧಿ ಸಾಲ ಪಡೆಯಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅನ್ನೇ ಅವಲಂಬಿಸಿರುತ್ತಾರೆ. ಇದುವರೆಗೂ ನಬಾರ್ಡ್ ನಿಂದ ಡಿಸಿಸಿ ಬ್ಯಾಂಕ್ ಗೆ ಕಡಿಮೆ ಬಡ್ಡಿದರದಲ್ಲಿ ಪುನರ್ಧನ ಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ಸಾಲ ನೀಡಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ಸಂಪನ್ಮೂಲದ ಕೊರತೆ ಆಗುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ನಬಾರ್ಡ್ ನವರು ಬ್ಯಾಂಕ್ ಗಳಿಗೆ ನೀಡುವ ಪುರ್ಧನ ಸೌಲಭ್ಯವನ್ನು ಗಣನೀಯವಾಗಿ ಕಡಿತಗೊಳಿಸಿರುತ್ತಾರೆ ಎಂದು ಮನವಿದಾರರು ತಿಳಿಸಿದರು.

ಈ ಹಿಂದೆ ಇದ್ದ ಶೇ. 40ರಿಂದ 2024 -25ನೇ ಸಾಲಿಗೆ ಶೇ. 10 ರಷ್ಟು ಕಡಿತಗೊಳಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಗಣನೀಯವಾಗಿ ನಬಾರ್ಡ್ ನಿಂದ ಪುನರ್ಧನ ಕಡಿಮೆಯಾಗಿದೆ. ಇದರಿಂದ ಡಿಸಿಸಿ ಬ್ಯಾಂಕ್ ರೈತರ ಸಾಲ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿದಾರರು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಾಲದ ಬೇಡಿಕೆ 2650 ಕೋಟಿ ರೂ. ಇದೆ. ಆದರೆ, ಪ್ರಸ್ತುತ 1200 ಕೋಟಿ ರೂ. ಸಾಲ ಮಾತ್ರ ನೀಡಲು ಸಾಧ್ಯವಾಗಿದೆ. ಬೇಡಿಕೆಯ ಅರ್ಧದಷ್ಟನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಪ್ರಾಥಮಿಕ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಸ್ವಂತ ಬಂಡವಾಳದಿಂದ ಸಾಲ ನೀಡುವ ಶಕ್ತಿ ಹೊಂದಿಲ್ಲ. ಅನಿವಾರ್ಯವಾಗಿ ಅಪೆಕ್ಸ್ ಬ್ಯಾಂಕ್ ನಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ನಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಆದ್ದರಿಂದ ಜಿಲ್ಲೆಯ ಪರವಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ಜಿಲ್ಲಾ ಬ್ಯಾಂಕ್ ಗಳಿಗೆ ನೀಡಲಾಗುತ್ತಿರುವ ನಬಾರ್ಡ್ ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ನಬಾರ್ಡ್ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಮುಖರಾದ ವಾಟಗೋಡು ಸುರೇಶ್, ವಿದ್ಯಾಧರ್, ಸುಧೀರ್, ವೆಂಕಟೇಶ್, ದುಗ್ಗಪ್ಪಗೌಡ, ಶಿವಶಂಕರ್, ಚಂದ್ರಶೇಖರಗೌಡ, ಹನುಮಂತು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *