ಶಿವಮೊಗ್ಗ :- ನಗರದ ಹಳೇ ಶಿವಪ್ಪನಾಯಕ ಮಾರುಕಟ್ಟೆಯಲ್ಲಿದ್ದ ಹೂವಿನ ವ್ಯಾಪಾರಿಗಳಿಗೆ ಹೊಸ ಕಟ್ಟಡದಲ್ಲಿ ಸಿಗುವ ಜಗದ ಕನಸು ಈಗ ನನಸಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ೧೭ವರ್ಷಗಳ ಹಿಂದೆ ಶಿವಪ್ಪನಾಯಕ ಮಾರುಕಟ್ಟೆಯ ಜಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ೧೧೭ ಹೂವಿನ ವ್ಯಾಪಾರಿಗಳು ಹಾಗೂ ಕೆಲವು ಗ್ರಂಥಿಕೆ ವ್ಯಾಪಾರಿಗಳನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು. ಈಗ ಅವರಿಗೆ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಕಟ್ಟಡದಲ್ಲಿ ಅವಕಾಶ ಕಲ್ಪಿಸುವುದರ ಮೂಲಕ ನೆನೆಗುದಿಗೆ ಬಿದ್ದಿದ್ದ ಹೂವಿನ ವ್ಯಾಪಾರಿಗಳ ಬಹುವರ್ಷಗಳ ಕನಸನ್ನು ಮಹಾನಗರಪಾಲಿಕೆ ನನಸಾಗಿಸಿದ್ದು ಜಿಲ್ಲಾಧಿಕಾರಿಗಳು ನಿನ್ನೆ ಆದೇಶ ನೀಡಿದ್ದಾರೆ ಎಂದು ಹೇಳಿದರು.
ಅಂದಿನ ನಗರಸಭೆ, ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಅಂದಿನ ಶಾಸಕರೆಲ್ಲರೂ ಸೇರಿ ಈ ಹೂವಿನ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಒಂದು ಹೊಸ ರೂಪಕೊಡುವ ಕೆಲಸ ಮಾಡಲಾಗಿತ್ತು. ಅವರಿಗೆ ಬದಲಿ ವ್ಯವಸ್ಥೆ ಕೊಡುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳು ಬಾಡಿಗೆ ನಿಗಧಿಮಾಡಿ, ಆದೇಶ ಮಾಡುವುದರ ಮೂಲಕ ನಿನ್ನೆ (೩೧-೧೨-೨೦೨೫) ಸಾಕಾರಗೊಂಡಿದೆ. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪಂಕಜ್ಕುಮಾರ್ ಪಾಂಡೆ ಅವರ ಅವಧಿಯಲ್ಲಿ ಈ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭವಾಗಿತ್ತು. ಹಳೇ ಕಟ್ಟಡದಲ್ಲಿ ಹೂವಿನ ವ್ಯಾಪಾರಿಗಳಲ್ಲದೆ, ಬೇರೆ ಬೇರೆ ಬ್ಯಾಂಕುಗಳು, ರಾಜಕೀಯ ಪಕ್ಷ ಹಾಗೂ ಇನ್ನಿತರ ಸರ್ಕಾರಿ ಕಛೇರಿಗಳೂ ಇದ್ದವು. ಇವರಿಗೆ ಗಾರ್ಡನ್ ಏರಿಯಾದ ಪಾಲಿಕೆಯ ಹೊಸ ವಾಣಿಜ್ಯ ಸಂಕಿರ್ಣದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ಹೂವಿನ ವ್ಯಾಪಾರಿಗಳಿಗೆ ೧೨ ವರ್ಷದ ಒಡಂಬಡಿಕೆಯೊಂದಿಗೆ ಹೊಸ ಕಟ್ಟಡದಲ್ಲಿ ಮಳಿಗೆ ನೀಡಲಾಗುತ್ತದೆ ಮಾಸಿಕ ೫೩೩೭ ರೂ. ಬಾಡಿಗೆ ಹಾಗೂ ೧,೧೫,೩೫೧ ರೂ. ಠೇವಣಿ ಪಡೆದುಕೊಂಡು ಮಳಿಗೆ ನೀಡಲಾಗುವುದು. ೧೨ ವರ್ಷಗಳ ನಂತರ ಅವರು ಅಂದಿನ ನಿಯಮದ ಪ್ರಕಾರ ಬಾಡಿಗೆ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಈ ೧೧೭ವ್ಯಾಪಾರಿಗಳಿಗೆ ನೀಡುವ ಪುನರ್ವಸತಿ ಇದಾಗಿದ್ದು, ಅವರಿಗೆ ಮಳಿಗೆಗಳನ್ನು ಹಂಚಿದ ಬಳಿಕ ಉಳಿಯುವ ಮಳಿಗೆಗಳಿಗೆ ಹರಾಜು ಮೂಲಕ ಅವುಗಳನ್ನು ನೀಡಲಾಗುವುದು. ಹಳೇ ತಾಲ್ಲೂಕು ಕಛೇರಿ ರಸ್ತೆಯಲ್ಲಿ ಈಗಿರುವ ಹೂವಿನ ವ್ಯಾಪಾರಿಗಳು ಇನ್ನು ಮುಂದೆ ಅಲ್ಲಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬೇಕು. ಆ ರಸ್ತೆಯಲ್ಲಿ ಯಾವುದೇ ಹೊಸ ಹೂವಿನ ವ್ಯಾಪಾರಿಗಳಿಗಾಗಲಿ, ಹಣ್ಣಿನ ವ್ಯಾಪಾರಿಗಳಿಗಾಗಲಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಕಾರ್ಯೋನ್ನುಖರಾಗಿದ್ದು ಆ ರಸ್ತೆಯನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.
ಗೌರವ ಲಾಡ್ಜ್ ಬಳಿ ಇರುವ ಪಾಲಿಕೆ ಕಟ್ಟಡದಲ್ಲಿ ಹಿಂದಿನ ಮಾರುಕಟ್ಟೆ ಕೆಡವಿದಾಗ ಅಲ್ಲಿದ್ದ ಸಂಘ-ಸಂಸ್ಥೆಗಳ ಕಛೇರಿಗಳಿಗೆ ಈ ಕಟ್ಟಡದಲ್ಲಿ ಅವಕಾಶ ನೀಡಲಾಗುವುದು ಎಂದರು.
ಶಿವಪ್ಪನಾಯಕ-ಅಮೀರ್ ಅಹ್ಮದ್ ವೃತ್ತದಲ್ಲಿರುವ ಅಂಡರ್ಪಾಸ್ ಬಳಕೆಗೆ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಹರಾಜಿನ ಮೂಲಕ ಮಹಿಳಾ ಬಜರ್ ಆರಂಭಿಸುವ ಬಗ್ಗೆಯೂ ವಿಚಾರ ವಿನಿಮಯ ನಡೆಯುತ್ತಿದ್ದು, ಕೆಆರ್ಪುರಂನಲ್ಲಿ ಕನ್ಸರ್ವೆನ್ಸಿ ಅಭಿವೃದ್ಧಿಪಡಿಸಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ ಅವರು, ಬಹುವರ್ಷಗಳಿಂದ ನೆನೆಗುದಿಗೆ ಬಿದ್ದ ಹೂವಿನ ವ್ಯಾಪಾರಿಗಳ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶ್ರಮಿಸಿದ ಪಾಲಿಕೆ ಆಯುಕ್ತ ಮತ್ತು ಜಿಲ್ಲಾಧಿಕಾರಿಗಳನ್ನು ಶಾಸಕರು ಅಭಿನಂದಿಸಿದರು. ಪಾಲಿಕೆಯ ನಿರ್ಮಿತ ಗಾಂಧಿನಗರದ ವಾಣಿಜ್ಯ ಸಂಕಿರ್ಣ ಮತ್ತು ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕಿರ್ಣದ ಹರಾಜು ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ್ರೆಡ್ಡಿ, ಪ್ರಮುಖರಾದ ಜನೇಶ್ವರ, ದೀನ್ದಯಾಳ್, ಶ್ರೀನಾಗ, ಮುರಳಿ, ವಿಶ್ವನಾಥ್, ಎನ್.ಜೆ. ನಾಗರಾಜ್ ಇದ್ದರು.