google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರೈಲ್ವೆ ಪ್ರಯಾಣದರ ಹೆಚ್ಚಳ ವಿರೋಧಿಸಿ ಇಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲ್ವೆ ಸ್ಟೇಷನ್ ಮುತ್ತಿಗೆ ಯತ್ನಿಸಿದಾಗ ಪೊಲೀಸರು ಅವರನ್ನು ತಡೆದ ಘಟನೆ ನಡೆಯಿತು.

ಅಚ್ಚೇ ದಿನ್ ಆಯೇಗಾ ಎಂದೇ ಅಧಿಕಾರದ ಗದ್ದುಗೆ ಹಿಡಿದ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲಾ ಒಂದು ರೀತಿ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಿದೆ. ಇದೀಗ ಜನಸಾಮಾನ್ಯರ ಸಾರಿಗೆ ಎಂದೇ ಖ್ಯಾತವಾಗಿರುವ ಮತ್ತು ಈ ದೇಶದ ಜನರ ಜೀವನಾಡಿಯಂತಾಗಿರುವ ರೈಲು ಪ್ರಯಾಣದರವನ್ನು ಪದೇ ಪದೇ ಹೆಚ್ಚಳ ಮಾಡಿರುವುದನ್ನು ಯುವ ಕಾಂಗ್ರೆಸ್ ಸಮಿತಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜವಳಿ ನಿಗಮದ ಅಧ್ಯಕ್ಷ ಚೇತನ್‌ಗೌಡ ಒಂದು ವರ್ಷದಲ್ಲಿ ಇದು ಎರಡನೇ ಬಾರಿ ರೈಲು ಪ್ರಯಾಣದರ ಹೆಚ್ಚಳ ಮಾಡುತ್ತಿರುವುದು ತೀವ್ರ ಖಂಡನೀಯ. ಬಿಜೆಪಿ ಒಂದು ಕಡೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುತ್ತಾ ಮತ್ತೊಂದೆಡೆ ಒಂದೊಂದೇ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಲು ಆಗ್ರಹಿಸಿ ಈ ದಿನ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದೇವೆ. ರೈಲು ಸಂಚಾರವು ಈ ದೇಶದ ಜನರ ಜೀವನಾಡಿಯಾಗಿದೆ. ಪ್ರತಿದಿನ ಕೋಟ್ಯಂತರ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ರೈಲು ವ್ಯವಸ್ಥೆ ಭಾರತದ್ದಾಗಿದ್ದು, ರೈಲು ಸಂಚಾರದಿಂದ ಸರ್ಕಾರಕ್ಕೆ ನಷ್ಟವೇನೂ ಆಗುತ್ತಿಲ್ಲ. ಆದರೆ, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ರೈಲು ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಮೂಲಕ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಬೇಕು. ರೈಲು ಪ್ರಯಾಣ ಹಿಂದಿನಂತೆ ಜನಸಾಮಾನ್ಯರ ಜೀವನಾಡಿಯಾಗಿರುವಂತೆ ನೋಡಿಕೊಳ್ಳಬೇಕು. ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ರಮೇಶ್ ಹೆಗ್ಡೆ, ಧೀರರಾಜ್ ಹೊನ್ನವಿಲೆ, ಯಮುನಾ ರಂಗೇಗೌಡ, ಗಿರೀಶ್, ಮಧುಸೂದನ್, ರಾಮು, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷರುಗಳಾದ ಗಿರೀಶ್, ಸಾಕ್ಲಿನ್, ಪ್ರವೀಣ, ಶಶಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಸತ್ತಾರ್, ಮಲಗೊಪ್ಪ ಶಿವು, ರೇಷ್ಮಾ, ನಿಖಿಲ್, ಟೌಪಿಕ್, ಬಾಬು, ಗೌತಮ್, ಅನುಪ್, ವಿಷ್ಣು, ಯೋಗೇಶ್ ಭೋವಿ, ರವಿ, ಅಶೋಕ್, ಲಿಂಗರಾಜು, ಆದರ್ಶ್ ಹಾಗೂ ನೂರಾರು ಯುವ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *