ಸಾಗರ :- ಧರ್ನುಮಾಸದಲ್ಲಿ ಅತ್ಯಂತ ಚಳಿ ಇರುತ್ತದೆ. ದೇಹವನ್ನು ಕುಗ್ಗಿಸುವ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿ, ಭಜನೆ ಮಾಡುವ ಮೂಲಕ ದುಶ್ಚಟಗಳನ್ನು ದೂರ ಇರಿಸಿ, ಸಂಬಂಧಗಳನ್ನು ದೂರ ಇರಿಸಿ ವೃತಾಚರಣೆ ಮಾಡುವುದು ನಿಮ್ಮ ಶ್ರದ್ಧಾಭಕ್ತಿಗೆ ಸಾಕ್ಷಿಯಾಗಿದೆ ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.
ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಅಯ್ಯಪ್ಪ ಸ್ವಾಮಿ ಸಂಯಮವನ್ನು ಕಲಿಸುವ ಪ್ರಮುಖ ದೇವರು. 41 ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧನೆಯಲ್ಲಿ ತೊಡಗಿಕೊಂಡಿರುವ ಮಾಲಾಧಾರಿಗಳ ಭಕ್ತಿ ನಿಜಕ್ಕೂ ಅನುಕರಣೀಯವಾದದ್ದು
ಮಾಲೆ ಧರಿಸಿದ ದಿನಗಳಿಗೆ ಮಾತ್ರ ನಮ್ಮ ಶ್ರದ್ದೆ ದುಶ್ಚಟಗಳಿಂದ ದೂರ ಇರದೇ, ಅದನ್ನು ಮುಂದುವರೆಸಬೇಕು. ಸಾಗರ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಲಕ್ಷ ದೀಪೋತ್ಸವ ಕತ್ತಲಿನಿಂದ ಬೆಳಕಿನ ಕಡೆ ನಮ್ಮನ್ನು ಕರೆದುಕೊಂಡು ಹೋಗುವ ಸಂಕೇತವಾಗಿದೆ ಎಂದು ಹೇಳಿದರು.
ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲಯಾಳಿ ಸಮಾಜ ಸಣ್ಣ ಸಮಾಜವಾದರೂ ಅತ್ಯುತ್ತಮವಾಗಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಎಲ್ಲ ಜಾತಿವರ್ಗದ ಜೊತೆ ಸ್ನೇಹಮಯಿ ಬಾಂಧವ್ಯ ತಾವು ಹೊಂದಿದ್ದೀರಿ. ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿರುವುದು ಅನುಕರಣೀಯ ಸಂಗತಿ. ನಿಮ್ಮ ಯೋಜನೆಗೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ಮತ್ತು ವೈಯಕ್ತಿಕವಾಗಿ ನೀಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಆರ್.ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ರವಿಚಂದ್ರನ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಟಿ.ವಿ.ಪಾಂಡುರಂಗ, ಮಲ್ಲಿಕಾರ್ಜುನ ಹಕ್ರೆ ಇನ್ನಿತರರು ಹಾಜರಿದ್ದರು. ಸುಶೀಲಾ ಪ್ರಾರ್ಥಿಸಿದರು. ಮುಕುಂದ ನಾಯರ್ ಸ್ವಾಗತಿಸಿದರು. ವಿಷ್ಣು ನಾಯರ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
