google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಭಾರತೀಯ ರಾಷ್ಟ್ರೀಯ ಹೆದ್ದಾರಿ 206ರ ಅಭಿವೃದ್ಧಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 15-16ರಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ ಮತ್ತು ಕಟ್ಟಡಗಳ ಸ್ವತ್ತಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಮೂಲಕ ಕಂದಾಯ ಸಚಿವ ಕೃಷ್ಣಭೈರೇಗೌಡರಿಗೆ ಶಾಸಕಿ ಶಾರದಾ ಪೂರ್‍ಯಾನಾಯ್ಕ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಾಲ್ಕು ಪಥದ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಭೂಸ್ವಾಧೀನ ಪಡಿಸಿಕೊಂಡಿದ್ದು, ವಿಶೇಷ ಭೂಸ್ವಾಧೀನಾಧಿಕಾರಿಯವರು ಮಲವಗೊಪ್ಪದಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ ಮತ್ತು ಕಟ್ಟಡಗಳ ಸ್ವತ್ತಿನ ಮಾಲೀಕರುಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಕಟ್ಟಡಗಳಿಗೆ ಮಾತ್ರ ಪರಿಹಾರ ನೀಡುವುದಾಗಿ, ಭೂಮಿಗೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲವೆಂದು ಕಾರಣ, ಸ್ವತ್ತಿನ ಮೂಲ ದಾಖಲೆಗಳಲ್ಲಿ ಸರ್ಕಾರಿ ಪಡ, ಗೋಮಾಳ, ಶ್ರೀ ಚನ್ನಬಸವೇಶ್ವರ ದೇವಾಲಯ ಹಾಗೂ ಸಕ್ಕರೆ ಕಾರ್ಖಾನೆ ಎಂಬುದಾಗಿರುವುದರಿಂದ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ ಮತ್ತು ಕಟ್ಟಡಗಳ ಸ್ವತ್ತಿನ ಮಾಲೀಕರುಗಳಿಗೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ. ಆದರೆ ನಿವೇಶನ ಮತ್ತು ಕಟ್ಟಡಗಳ ಮಾಲೀಕರು ನೂರಾರು ವರ್ಷಗಳಿಂದ ಸ್ವಾಧೀನದಲ್ಲಿದ್ದು, ಅಲ್ಲೇ ವಾಸ ಮಾಡಿಕೊಂಡಿದ್ದು ಸರ್ಕಾರಕ್ಕೆ ತೆರಿಗೆಯನ್ನು ಸಹ ಕಟ್ಟುತ್ತಾ ಬಂದಿದ್ದಾರೆ.

ಈ ಹಿಂದೆ ಮಲವಗೊಪ್ಪ ಗ್ರಾಮವು ಮಂಡಲ ಪಂಚಾಯ್ತಿಯಿಂದ ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಗೆ ವರ್ಗಾವಣೆಗೊಂಡಾಗ ಅಧಿಕಾರಿಗಳ ತಪ್ಪಿನಿಂದ ಸರಿಯಾಗಿ ದಾಖಲೆಗಳನ್ನು ನಿರ್ವಹಿಸದೇ ನಿವೇಶನ ಮತ್ತು ಕಟ್ಟಡ ಮಾಲೀಕರುಗಳಿಗೆ ಮಾಹಿತಿ ಕೊರತೆಯಿಂದ ತೊಂದರೆಯಾಗಿದ್ದು, ಭಾರತ ಸರ್ಕಾರ ಜರಿಗೆ ತಂದಿರುವ ಭೂಸ್ವಾಧೀನ ಮತ್ತು ಹಕ್ಕುದಾರರ ಪುನರ್ವಸತಿ ಕಾಯ್ದೆ-2013ರ ಅನ್ವಯ ಭೂದಾಖಲೆಗಳನ್ನು ಸಕ್ರಮಗೊಳಿಸಿ, ಆದೇಶಮಾಡಿ ನಿವೇಶನ ಮತ್ತು ಕಟ್ಟಡಗಳ ಮಾಲೀಕರುಗಳಿಗೆ ಸೂಕ್ತ ಪರಿಹಾರ ಘೋಷಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಬಗ್ಗೆ ಆಗಸ್ಟ್ ತಿಂಗಳಲ್ಲೇ ಶಾಸಕರು ಮನವಿ ನೀಡಿದ್ದು, ಸಚಿವರು ಕೂಡ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದ್ದರೂ ಸಂತ್ರಸ್ಥರಿಗೆ ಇನ್ನೂ ಪರಿಹಾರ ನೀಡದೇ ಇರುವುದರಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈತಸಂಘದ ಕೆ.ಟಿ. ಗಂಗಾಧರ್ ಹಾಗೂ ರೈತ ನಾಯಕರು ಮತ್ತು ಸ್ಥಳೀಯ ಸಂತ್ರಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *