ಶಿವಮೊಗ್ಗ :- ವಿದ್ಯಾನಗರ ವಾರ್ಡ್ ನಂ. 34ರ ಮೆಹಬೂಬ್ ನಗರ ಸೇರಿದಂತೆ ಹಲವು ಬಡಾವಣೆಯ ನಿವಾಸಿಗಳಿಗೆ ಹಳೇ ಚರಂಡಿಗಳ ದುರಸ್ತಿ ಹಾಗೂ ಉಳಿದ ಚರಂಡಿ ಕಾಮಗಾರಿಗಳ ಪೂರ್ಣಗೊಳಿಸಲು ಒತ್ತಾಯಿಸಿ, ಇಂದು ಕರ್ನಾಟಕ ರಾಜ್ಯ ನಿಸ್ವಾರ್ಥ ಜನಶಕ್ತಿ ವೇದಿಕೆಯ ಸಂಸ್ಥಾಪಕ ಹಾಗೂ ರಾಜಧ್ಯಕ್ಷ ಎಂ. ಸಮೀವುಲ್ಲಾ ಅವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ವಾರ್ಡ್ ನಂ.೩೪ರಲ್ಲಿನ ವಾದಿ-ಇ-ಹುದಾ, ಮಹ ಬೂಬ್ ನಗರ, ಮದಾರಿಪಾಳ್ಯ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ 50 ವರ್ಷಗಳಿಂದ ಯಾವುದೇ ಸಮಸ್ಯೆಗಳು ಬಗೆ ಹರಿದಿಲ್ಲ. ಕಾಮಗಾರಿಗಳು ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿವೆ. ಚರಂಡಿ ಕೆಲಸಗಳು ಕೂಡ ಪೂರ್ಣವಾಗದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಖಾಯಿಲೆ ಹರಡುವ ಸಂಭವವಿದೆ. ಆದ್ದರಿಂದ ಮೊದಲು ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿದಾರರು ತಿಳಿಸಿದರು.
ಮೆಹಬೂಬ್ ನಗರದ ಒಂದನೇ ಮುಖ್ಯರಸ್ತೆ ಹಾಗೂ ವಿವಿಧ ಕ್ರಾಸ್‌ಗಳ ಕಾಮಗಾರಿ ಬಹಳ ವರ್ಷಗಳಿಂದ ಅರ್ಧಕ್ಕೆ ನಿಂತಿದೆ. ಮತ್ತು ಇಲ್ಲಿ ಬೀದಿ ದೀಪಗಳು ಕೂಡ ಸರಿಯಾಗಿ ಇಲ್ಲ. ಇದ್ದರೂ ಬಲ್ಪ್‌ಗಳು ಹಾಳಾಗಿವೆ. ಕೂಡಲೇ ವಿದ್ಯುತ್ ಬಲ್ಪ್‌ಗಳನ್ನು ಅಳವಡಿಸಬೇಕು ಮತ್ತು ಕತ್ತಲು ಇರುವ ಜಗಗಳಲ್ಲಿ ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಬೇಕು, ಎಲ್ಲಾ ಕೇರಿಗಳಲ್ಲಿ ಬೀದಿ ದೀಪಗಳ ಹಾಕಿಸಬೇಕು. ಶಾಸಕರ ಅನುದಾನದಲ್ಲಿ ಸೋಲಾರ್ ಲೈಟ್ ಕಂಬ ಅಳವಡಿಸಬೇಕು. ಯುಜಿಡಿ ಕಾಮಗಾರಿ ಕೂಡಲೇ ಆರಂಭಿಸಬೇಕು. ಚರಂಡಿಗಳಲ್ಲಿ ಕೆಟ್ಟವಾಸನೆ ತುಂಬಿದ್ದು ಸ್ವಚ್ಛ ಗೊಳಿಸಬೇಕು. ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಹಂದಿ, ನಾಯಿಗಳ ನಿಯಂತ್ರಿಸಬೇಕು. ಕುಡಿಯುವ ನೀರಿನ ಪೂರೈಕೆಯಾಗಬೇಕು ಹೊಸ ಪೈಪ್‌ಲೈನ್ ಮೀಟರ್‌ಗಳನ್ನು ನಿವಾಸಿಗಳ ಗಮನಕ್ಕೆ ತಾರದೇ ಅಳವಡಿಸಲಾಗಿತ್ತು. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಮನವಿದಾರರು ಆಗ್ರಹಿಸಿದರು.
ಶಿವಮೊಗ್ಗ-ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸೂಳೆಬೈಲ್ ಸರ್ಕಲ್‌ವರೆಗೆ ದಾರಿದೀಪಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಕತ್ತಲಿನಲ್ಲೇ ಓಡಾಡುವಂತೆ ಆಗಿದೆ. ಹಾಗಾಗಿ ಕಳ್ಳರಕಾಟ ಹೆಚ್ಚಾಗಿದೆ. ಕೂಡಲೇ ಬೀದಿ ದೀಪಗಳನ್ನು ಅಳವಡಿಸ ಬೇಕು ಎಂದು ಮನವಿದಾರರು ಒತ್ತಾಯಿಸಿದರು.
ವಿಸ್ಡಂ ಶಾಲೆ ಮತ್ತು ಹಲೀಮ ಮಸೀದಿ ಎದುರು ಕೇರಿಗಳ ಕೊಳಚೆ ನೀರು ಬಂದು ನಿಲ್ಲುತ್ತದೆ. ಈ ಭಾಗದಲ್ಲಿ ಸೊಳ್ಳೆಗಳ ಹೆಚ್ಚಾಗಿದೆ. ಡೆಂಗ್ಯೂಜ್ವರ ಹರಡುವ ಸಂಭವವಿದೆ. ಕೆಟ್ಟವಾಸನೆ ಬರುತ್ತದೆ. ಕೂಡಲೇ ಚರಂಡಿಯನ್ನು ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಆಯುಕ್ತ ಮಾಯಣ್ಣಗೌಡ ಅವರು ವಾರ್ಡ್ ನಂ.೩೪ರ ಎಲ್ಲಾ ಚರಂಡಿಗಳನ್ನು ಒಂದು ತಿಂಗಳೊಳಗೆ ಸ್ವಚ್ಛಗೊಳಿಸುವಂತೆ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಆ ಭಾಗಗಳಲ್ಲಿ ಹೊಸ ರಸ್ತೆಗಳ ನಿರ್ಮಾಣ ಮತ್ತು ಹಳೇ ರಸ್ತೆಗಳ ದುರಸ್ಥಿ, ಹೊಸಚರಂಡಿ ಕಾಮಗಾರಿಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಟೆಂಡರ್ ಕೂಡ ಕರೆಯಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಈ ಕೆಲಸವೂ ಕೂಡ ಮುಗಿಯಲಿದೆ. ಮತ್ತು ಬೀದಿ ದೀಪಗಳನ್ನು ಒಂದೆರೆಡು ದಿನಗಳಲ್ಲಿಯೇ ಅಳವಡಿಸುವುದಾಗಿ ಭರವಸೆ ನೀಡಿದರು.
ಮನವಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ರಿಯಾಜ್ ಅಹ್ಮದ್, ಅಬ್ದುಲ್ ವಾಹಬ್ ಮುಲ್ಲಾ, ಮಹಮದ್ ಯೂಸಫ್, ಮಹಕದ್ ಮಸೂದ್, ರಮಾನುಲ್ಲಾಖಾನ್, ಶಬ್ಬೀರ್‌ಖಾನ್, ಇನಾಯಿತ್, ಕೆ.ಬಿ. ಇಬ್ರಾಹಿಂ, ಸೂಫಿಮಲಾನ, ಮಹಮದ್ ಅನೀಫ್, ಮಹಮದ್ ಗೌಸ್ ಖಾನ್, ವಾಹಬ್‌ಸಾಬ್, ಸಫೀ ಬೇಗ್, ಅಬ್ದುಲ್‌ರಹೀಂ, ಜಫ್ರುಲ್ಲಾಖಾನ್, ರಫೀಕ್ ಅಹ್ಮದ್, ಇಸ್ರಾದ್ ಅಹ್ಮದ್, ಅಸ್ಲಂ ಪಾಷಾ, ಸಾಹಿದ್‌ವಾಹಿದ್, ಸೋಹಲ್‌ಖಾನ್, ನಸ್ರುಲ್ಲಾ ಸೇರಿದಂತೆ ಹಲವರಿದ್ದರು.