google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಎಲ್ಲಾ ಕ್ಷೇತ್ರಗಳಲ್ಲಿ ಕಲಿಯುವ ಅವಕಾಶವಿದ್ದು, ಹೊಸತನವನ್ನು ಕಲಿಯುವ ಸೌಜನ್ಯತೆ ಬೆಳೆಸಿಕೊಂಡಾಗ ಮಾತ್ರ ನಿಜವಾದ ಮನುಷ್ಯರಾಗಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಮಂಗಳವಾರ ಎಸ್.ಆರ್‌.ಎನ್.ಎಂ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿಗಾಗಿ ಏರ್ಪಡಿಸಿದ್ದ “ಆಡಳಿತ ನಿರ್ವಹಣೆ – ಕೌಶಲ್ಯತೆ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದರು.

ವಿದ್ಯಾಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಏಕರೂಪವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಿಜವಾದ ಉನ್ನತಿಯಾಗುತ್ತದೆ. ಲೆಕ್ಕಾಚಾರವಿಲ್ಲದ ಬದುಕು ನಿರರ್ಥಕ. ಅಧಿಕಾರ ಎಂಬುದು ದರ್ಪದಿಂದ ಕೂಡಿರದೆ, ಸೌಜನ್ಯತೆಯಿಂದ ಕೂಡಿರಲಿ. ವಿಶ್ವಾಸಪೂರ್ವಕ ನಡೆ ಹೊಸತನವನ್ನು ಕಲಿಯಲು ಸಾಧ್ಯ ಮಾಡಿಕೊಡಲಿದೆ. 

ಯಶಸ್ಸಿಗೆ ಮೆಟ್ಟಿಲಿದೆ ವಿನಃ ಅಂತ್ಯವಿಲ್ಲ. ಬದುಕಿನ ದೊಡ್ಡ ಸಂಪತ್ತು ಬುದ್ಧಿವಂತಿಕೆ, ನಂಬಿಕೆ ಮತ್ತು ಸತ್ಯ ರಕ್ಷಣೆ ನೀಡಿದರೆ, ನಗು ದಿವ್ಯ ಔಷಧ. ಅಂತಹ ಕೌಶಲ್ಯತೆಯನ್ನು ರೂಡಿಸಿಕೊಳ್ಳಿ. ತಾನು ಸರ್ವಶ್ರೇಷ್ಠ ಎಂಬ ಭ್ರಮೆ ಬೇಡ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾದ ಕಾನೂನು ತಜ್ಞ ವೆಂಕಟೇಶರಾವ್ ಮಾತನಾಡಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಜವಾಬ್ದಾರರು. ಅಲ್ಲಿ ಅನುದಾನಿತ ಮತ್ತು ಅನುದಾನರಹಿತ ಎಂಬ ವ್ಯತ್ಯಾಸವಿಲ್ಲ. ಕರ್ನಾಟಕ ಸರ್ಕಾರದ ಶಿಕ್ಷಣ ಕಾಯ್ದೆಯನ್ನು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಗಳು ಅಧ್ಯಯನ ನಡೆಸಬೇಕು. ಶಿಕ್ಷಣ ಇಲಾಖೆಯೆಂಬುದು ತನ್ನದೇ ಇತಿಹಾಸ ಹೊಂದಿದೆ. ಬ್ರಿಟಿಷರ ಕಾಲದಲ್ಲಿ ಕಂದಾಯ ಮತ್ತು ಶಿಕ್ಷಣೆ ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿತ್ತು ಎಂಬುದು ವಿಶೇಷ.

ಮಾಹಿತಿ ಹಕ್ಕು ಅಧಿನಿಯಮ ಬಹುದೊಡ್ಡ ಪ್ರಬಲವಾದ ಅಸ್ತ್ರವಾಗಿದೆ. ಪ್ರತಿಯೊಂದು ಆಡಳಿತ ಹಂತದಲ್ಲಿ ಸಾರ್ವಜನಿಕರು ಭಾಗವಹಿಸಲು ಮಾಹಿತಿ ಹಕ್ಕು ಅವಕಾಶ ಮಾಡಿಕೊಟ್ಟಿದೆ. ಸವಾಲುಗಳನ್ನು ವಿಮರ್ಶಿಸಲು ಪ್ರಯತ್ನಿಸಿ. ಅದು ಜ್ಞಾನಾರ್ಜನೆಯೊಂದಿಗೆ ಹೊಸ ಅನುಭವಗಳನ್ನು ನೀಡುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಪಿ.ಮೈಲಾರಪ್ಪ, ಎಂ.ಎಸ್.ಅನಂತದತ್ತ, ಜಿ.ಎನ್.ಸುಧೀರ್, ಹೆಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು.  

Leave a Reply

Your email address will not be published. Required fields are marked *