ಶಿವಮೊಗ್ಗ :- ಆ. 7ರ ನಾಳೆ ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದೆ. ಪ್ರತೀವರ್ಷ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿತ್ತು. ಇದರಿಂದ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅನುಕೂಲವಾಗುತ್ತಿತ್ತು. ಆದರೆ ಸಮುದಾಯ ಭವನದಲ್ಲಿ ಆಚರಿಸುವುದರಿಂದ ಅದು ದೂರವಾಗುತ್ತದೆ. ಜೊತೆಗೆ ಕೇವಲ 200ರಿಂದ 250 ಜನ ಕುಳಿತುಕೊಳ್ಳಬಹುದಷ್ಟೇ ಹಾಗಾಗಿ ಕುವೆಂಪು ರಂಗಮಂದಿರದಲ್ಲಿಯೇ ಆಚರಿಸಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ನಿರ್ದೇಶಕ ವೈ.ಬಿ. ಚಂದ್ರಕಾಂತ್ ಇಂದು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
ಅಲ್ಲದೆ ಆಹ್ವಾನ ಪತ್ರಿಕೆಯನ್ನು ಅಧಿಕೃತ ವಾಲ್ಮೀಕಿ ನಾಯಕ ಸಂಘದ ಜಿಲ್ಲಾಧ್ಯಕ್ಷರಿಗೆ ನೀಡಿಲ್ಲ. ಸಂಘಕ್ಕೂ ತಿಳಿಸಿಲ್ಲ. ಸಂಘದಲ್ಲಿ ಇಲ್ಲದವರಿಗೆ ಮಣೆಹಾಕಲಾಗಿದೆ. ಏಕೆ ಈ ತಾರತಮ್ಯ ಇದೆಲ್ಲಾ ನಿಲ್ಲಬೇಕು ಈ ಬಗ್ಗೆ ಪರಿಶಿಷ್ಟ ವರ್ಗದ ಕಲ್ಯಾಣಧಿಕಾರಿಯನ್ನು ವಿಚಾರಿಸಿದರೆ ಅವರು ನಿರ್ಲಕ್ಷ್ಯದ ಉತ್ತರ ಕೊಡುತ್ತಾರೆ. ಇದು ಸರಿಯಲ್ಲ ಇವರ ವಿರುದ್ಧವೂ ಕೂಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಎಂ.ಹೆಚ್. ಶೇಖರಪ್ಪ ಮಾತನಾಡಿ, ಅಧಿಕಾರಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಕಾಟಾಚಾರಕ್ಕೆ ಆಗಬಾರದು ಮೆರವಣಿಗೆ ಕೂಡ ಸರಿಯಾಗಿ ನಡೆಯುತ್ತಿಲ್ಲ. ಊಟದ ವ್ಯವಸ್ಥೆಯನ್ನು ಕೂಡ ಮಾಡಿಲ್ಲ. ಅಲ್ಲದೆ ಸಮುದಾಯ ಭವನದ ನಿರ್ಮಾಣದಲ್ಲಿ ಸಾಕಷ್ಟು ಅವ್ಯವಹಾರ ಕೂಡ ಆಗಿದೆ ಎಂದು ತಿಳಿದು ಬಂದಿದೆ. ಇದನ್ನು ಕೂಡ ತನಿಖೆಗೆ ಒಳಪಡಿಸಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಪ್ರಮುಖರಾದ ಎಂ.ಆರ್. ಮೋಹನ್, ನವೀನ್‌ಕುಮಾರ್, ಎಸ್.ಎನ್. ಮೇಘರಾಜ್ ಉಪಸ್ಥಿತರಿದ್ದರು.