
ಶಿವಮೊಗ್ಗ :- ಹಿಂದಿ ಹೇರಿಕೆ ಬೇಡ ಎಂದು ಕರ್ನಾಟಕ ರಕ್ಷಣಾವೇದಿಕೆಯ (ಕನ್ನಡಪರ ಸಂಘಟನೆಗಳ ಒಕ್ಕೂಟ) ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಹಿಂದಿಯೇತರ ರಾಜ್ಯಗಳ ಮೇಲೆ ರಾಜಭಾಷಾ ಆಯೋಗ ಬಲವಂತವಾಗಿ ಹಿಂದಿಯನ್ನು ಹೇರುತ್ತಿದೆ. ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಸಂಸದೀಯ ರಾಜ್ಯಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಕುತಂತ್ರಗಳ ಸಮಾಲೋಚನಾ ಕಾರ್ಯಾಗಾರಕ್ಕೆ ನಮ್ಮ ರಾಜ್ಯ ಮುಖಂಡರು ತೆರಳಿ ಪ್ರತಿಭಟನೆ ನಡೆಸಿ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಭಾಗದಲ್ಲಿ ಹಿಂದಿ ಪ್ರಚಾರಕ್ಕೆ ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಲು ಮುಂದಾದರೆ ಕರ್ನಾಟಕ ರಕ್ಷಣಾವೇದಿಕೆ ಅದನ್ನು ಸಹಿಸುವುದಿಲ್ಲ. ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬೇಡ. ಮತ್ತು ಈಗಾಗಲೇ ವೇದಿಕೆ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು ಮೊಕದ್ದಮೆಯನ್ನು ವಾಪಾಸ್ಸು ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮಂಜು, ರಾಜ್ಯ ಕಾರ್ಯದರ್ಶಿ ಎಸ್. ಮಧು, ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಪ್ರಮುಖರಾದ ಜಹ್ನವಿರೆಡ್ಡಿ, ಲೀಲಾವತಿ, ಕುಸುಮಾ, ಕಲಾವತಿ, ಮೆಹರುನ್ನೀಸಾ, ಮುಜೀಬಾಖಾನಂ, ಲಕ್ಷ್ಮೀ ಶಶಿ, ಮಂಜುಳಾ ನಾಗರಾಜ್, ಶೈಲೇಶ್‌ಕುಮಾರ್, ಅಂಬರೀಶ್, ರವಿ, ನವೀನ್, ನ್ಯಾಮತ್‌ಬೇಗ್ ಸೇರಿದಂತೆ ಹಲವರಿದ್ದರು.