google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಈ ಭಾರಿ ನಾಡಹಬ್ಬ ಶಿವಮೊಗ್ಗ ದಸರಾವನ್ನು 11ದಿನಗಳ ಕಾಲ ಅತ್ಯಂತ ಸಂಭ್ರಮ ಸಡಗರದಿಂದ ನಡೆಸಲಾಗುವುದು ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮೈಸೂರು ಬಿಟ್ಟರೆ ಶಿವಮೊಗ್ಗ ದಸರಾವೇ ರಾಜ್ಯದಲ್ಲಿ ಅತ್ಯಂತ ಹೆಸರಾಗಿದೆ. ಶಿವಮೊಗ್ಗದಲ್ಲಿ ಸೆ. 22ರಿಂದ ಅಕ್ಟೋಬರ್ 2ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಈಗಾಗಲೇ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸುಮಾರು 14 ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಮಿತಿಗಳು ಕ್ರೀಯಾಶೀಲವಾಗಿವೆ ಅಂಬಾರಿ ಕೂಡ ವಿಶೇಷವಾಗಿ ನಡೆಯಲಿದೆ. ಈ ದಿನ ಸಕ್ರೇಬೈಲು ಆನೆ ಬಿಡಾರಕ್ಕೆ ಹೋಗಿ ಆನೆಗಳಿಗೆ ಆಮಂತ್ರಣ ನೀಡಿ, ಆಹ್ವಾನಿಸಲಾಗುವುದು ಎಂದರು.

ಸೆ.೨೨ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಈ ಬಾರಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಆಗಿರುವ ಬಗ್ಗವಳ್ಳಿ ಸೋಮಶೇಖರ ರಾಜು ಅವರು ದಸರಾ ಉದ್ಘಾಟನೆಯನ್ನು ನಡೆಸುವರು. ಇವರು ತರಿಕೆರೆಯವರು. ಭಾರತೀಯ ಸೈನ್ಯಕ್ಕೆ ತನ್ನದೇ ಆದ ಶಕ್ತಿಯನ್ನು ತುಂಬಿದವರು. ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಇಂತಹವರು ದಸರಾವನ್ನು ಉದ್ಘಾಟಿಸುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸೇರಿದಂತೆ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ಎಲ್ಲಾ ಮುಖಂಡರು ಉಳಿದ ಎಲ್ಲಾ ಸಮಾರಂಭಗಳ ಮುಖ್ಯ ಅತಿಥಿಗಳು ಹಾಗೂ ವಿಶೇಷ ಆಹ್ವಾನಿತರು ಆಗಿದ್ದಾರೆ ಎಂದರು.

ಪ್ರಮುಖವಾಗಿ ಸ್ವಾಗತ ಸಮಿತಿ, ಉತ್ಸವ ಸಮಿತಿ, ಮಹಿಳಾ ಹಾಗೂ ಗಮಕ ದಸರಾ ಸಮಿತಿ, ಅಲಂಕಾರ ದಸರಾ ಸಮಿತಿ, ಸಾಂಸ್ಕತಿಕ ದಸರಾ ಸಮಿತಿ, ಯುವದಸರಾ ಸಮಿತಿ, ಪರಿಸರ ಮತ್ತು ಪೌರಕಾರ್ಮಿಕರ ದಸರಾ ಸಮಿತಿ, ಯೋಗ ದಸರಾ ಸಮಿತಿ, ರಂಗದಸರಾ ಸಮಿತಿ, ರೈತದಸರಾ ಸಮಿತಿ, ಆಹಾರ ದಸರಾ ಸಮಿತಿ, ಚಲನಚಿತ್ರ ಹಾಗೂ ಪತ್ರಿಕಾ ದಸರಾ ಸಮಿತಿ, ಮಕ್ಕಳ ದಸರಾ ಸಮಿತಿ, ಕಲಾ ಮತ್ತು ಜನ ದಸರಾ ಸಮಿತಿಗಳು ಇದ್ದು, ಈ ಎಲ್ಲಾ ಸಮಿತಿಗಳು ತಮ್ಮ ತಮ್ಮ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಡಲಿದ್ದಾರೆ ಎಂದರು.

ಸೆ.೨೩ರಂದು ಮಕ್ಕಳ ದಸರಾ, ಸುಗಮ ಸಂಗೀತ, ಯಕ್ಷಸಂಭ್ರಮ ನಡೆಯುತ್ತದೆ. ಸರಿಗಮಪ ಖ್ಯಾತಿಯ ಕುಮಾರಿ ದಿಯಾ ಹೆಗಡೆ ಹಾಗೂ ಅಂತರಾಷ್ಟ್ರೀಯ ನೃತ್ಯಗಾರ್ತಿ ಕು. ಋತುಸ್ಪರ್ಶ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸೆ.೨೪ರ ಬುಧವಾರ ನಡೆಯಲಿರುವ ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಚಲನಚಿತ್ರ ನಟರುಗಳಾದ ಶರಣ್, ಕಾರುಣ್ಯರಾವ್, ಸಾಯಿಪ್ರಕಾಶ್, ರೂಪ ಅಯ್ಯರ್, ಗಣೇಶ್ ಮಂದಾರ್ತಿ ಮುಂತಾದವರು ಭಾಗವಹಿಸಲಿದ್ದಾರೆ.

ಸೆ.೨೫ರಂದು ರೈತ ದಸರಾ, ಕಲಾ ದಸರಾ ನಡೆಯಲಿದೆ. ಸೆ.೨೬ರಂದು ಕಲಾ ದಸರಾ ಕಾರ್ಯಕ್ರಮ ಸಂಜೆ ೬ ಗಂಟೆಗೆ ಶಿವಪ್ಪ ನಾಯಕ ಅರಮನೆಯಲ್ಲಿ ನಡೆಯಲಿದ್ದು, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವರಪುರ ಉದ್ಘಾಟಿಸುವರು. ಸೆ. 26ರಂದು ಸಂಜೆ 5 ಗಂಟೆಗೆ ಶಿವಪ್ಪನಾಯಕ ಅರಮನೆಯಲ್ಲಿ ನಡೆಯಲಿರುವ ನಗೆಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಭಾಗವಹಿಸುವರು. ಸೆ. 27ರಂದು ಬೆಳಿಗ್ಗೆ 10 ಗಂಟೆಗೆ ಪೌರ ಕಾರ್ಮಿಕರ ದಸರಾ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಪತ್ರಕರ್ತ ಎನ್. ರವಿಕುಮಾರ್ ಉದ್ಘಾಟಿಸುವರು ಎಂದರು.

ಹಾಗೆಯೇ ಸೆ. 28ರಂದು ಯೋಗದಸರಾ ಗಮಕ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದ್ದು, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಸಂಘದ ಅಧ್ಯಕ್ಷ ಕೆ.ವಿ. ಶಿವಕುಮಾರ್, ನಿರ್ದೇಶಕ ಎನ್. ರವಿಕುಮಾರ್ ಭಾಗವಹಿಸುವರು.ಸೆ. 28ರಂದು ಸಂಜೆ ೫ ಗಂಟೆಗೆ ಅಲ್ಲಮಪ್ರಭು (ಫ್ರೀಡಂಪಾರ್ಕ್) ಮೈದಾನದಲ್ಲಿ ಮ್ಯೂಸಿಕಲ್ ನೈಟ್ ನಡೆಯಲಿದ್ದು, ಖ್ಯಾತ ನಟ ಡಾ. ಶಿವರಾಜ್‌ಕುಮಾರ್ ಭಾಗವಹಿಸುವರು. ಇವರ ಜೊತೆಗೆ ಸಚಿವ ಮಧುಬಂಗಾರಪ್ಪ ಕೂಡ ಉಪಸ್ಥಿತರಿರುತ್ತಾರೆ. ಅಂದು ಅಲ್ಲಿ ಆಹಾರ ಮೇಳ ಕೂಡ ಇರುತ್ತದೆ ಎಂದರು.

ಸೆ. 29ರಂದು ಬೆಳಿಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತದಲ್ಲಿ ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ನಡೆಯಲಿದೆ. ಹಾಗೆಯೇ ಸಂಜೆ 6 ಗಂಟೆಗೆ ಗೀತ ನೃತ್ಯವೈಭವ ಕಾರ್ಯಕ್ರಮ, ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮುಂತಾದವರು ಭಾಗವಹಿಸುವರು. ಸೆ. 30ರಂದು ಕಲಾ ಮತ್ತು ಜನ ದಸರಾ ಕುವೆಂಪು ರಂಗಮಂದಿರದಲ್ಲಿ, ಅಡುಗೆ ಮಾಡುವ ಸ್ಪರ್ಧೆ ವೀರಶೈವ ಕಲ್ಯಾಣ ಮಂಟಪದಲ್ಲಿ, ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ನಾದವೈಭವ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಚಲನಚಿತ್ರ ನಟಿ ಗೀತಾ ಇದರಲ್ಲಿ ಭಾಗವಹಿಸುತ್ತಾರೆ.

ಅ.೧ರಂದು ಸಂಜೆ ೫ ಗಂಟೆಗೆ ಇಲ್ಲಿಯೇ ನಡೆಯುವ ನಾಟ್ಯವೈಭವ ಕಾರ್ಯಕ್ರಮದಲ್ಲಿ ನಟಿ ಹರ್ಷಿತಾ ಪೂರ್ಣಚ್ಚ ಆಗಮಿಸುವರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್. ಈಶ್ವರಪ್ಪ ಭಾಗವಹಿಸಲಿದ್ದಾರೆ. ಅ. 2ರಂದು ಸಂಜೆ ೫ಗಂಟೆಗೆ ಸುರೇಖಾ ಹೆಗಡೆ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ ಎಂದರು.

ಅ. 2ರಂದು ದಸರಾ ಮಹೋತ್ಸವದ ಅಂಬಾರಿ ಮೆರವಣಿಗೆ ಮಧ್ಯಾಹ್ನ 2.30ಕ್ಕೆ ಆರಂಭವಾಗುತ್ತದೆ. ಅಂಬಾರಿ ಮೆರವಣಿಗೆಯಲ್ಲಿ ಈ ಬಾರಿ ಮೂರು ಆನೆಗಳಾದ ಸಾಗರ್, ಬಾಲಣ್ಣ, ಕುಂತಿ ಭಾಗವಹಿಸಲಿದ್ದು, ಸಾಗರ್ ಅಂಬಾರಿ ಹೋರಲಿದ್ದಾರೆ. ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ಅಂಬಾರಿ ಮೆರವಣಿಗೆಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ನಂತರ ಸಂಜೆ ಅಲ್ಲಮಪ್ರಭು ಮೈದಾನದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ವಿ.ಎಸ್. ರಾಜೀವ್ ಚಾಲನೆ ನೀಡುವರು. ಈ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಸಿಡಿಮದ್ದು ಮತ್ತು ರಾವಣ ದಹನವನ್ನು ಏರ್ಪಡಿಸಲಾಗಿದೆ. ಸಚಿವರುಗಳಾದ ಮಧುಬಂಗಾರಪ್ಪ ಹಾಗೂ ಶಿವರಾಜ್ ಎಸ್. ತಂಗಡಗಿ, ಬಿ.ಎಸ್. ಸುರೇಶ್, ರಹೀಂಖಾನ್ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ, ವಿವಿವಿಧ ಸಮಿತಿಯ ಮುಖ್ಯಸ್ಥರಾದ ಪುಷ್ಪಾವತಿ ಹೆಚ್.ಎಸ್. ಸಂತೋಷ್ ಹೆಚ್.ರಾಥೋಡ್, ಅನುಪಮ ಟಿ.ಆರ್., ಹರೀಶ್ ಡಿ., ಸಿದ್ದಪ್ಪ ಸಿ.ಆರ್., ಮಧುನಾಯಕ, ಸುಧಾಕರ ಬಿಜ್ಜೂರ್, ಕೃಷ್ಣಮೂರ್ತಿ, ಸತೀಶ್ ಆರ್.ಬಿ. ಮುಂತಾದವರಿದ್ದರು.

Leave a Reply

Your email address will not be published. Required fields are marked *