
ಶಿವಮೊಗ್ಗ :- ನಗರದಲ್ಲಿ ನಿರ್ಮಿಸಿರುವ ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಸೂಡ ನಿವೇಶನ ಪಡೆದು ಮನೆ ಕಟ್ಟದಿದ್ದವರಿಗೆ ನೋಟೀಸ್ ನೀಡಲಾಗುವುದು ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಸರ್ಕಾರದ ಸೂಚನೆಯಂತೆ ನಗರದ ಅನಧಿಕೃತ ಬಡಾವಣೆಗಳ ವಿರುದ್ಧ ಸೂಡಾದಿಂದ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಅನೇಕರು ಮೂಲಭೂತ ಸೌಲಭ್ಯ ಕಲ್ಪಿಸದೆ ನಿಯಮ ಬಾಹಿರವಾಗಿ ಬಡಾವಣೆಗಳನ್ನು ನಿರ್ಮಿಸಿದ್ದು ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಲ್ಲದೇ ಸೂಡದಿಂದ ನಿವೇಶನ ಪಡೆದು ಹತ್ತು ವರ್ಷ ವಾದರೂ ಮನೆ ಕಟ್ಟದ 2732 ಜನರಿಗೆ ಕಾನೂನು ರೀತಿ ನೋಟೀಸ್ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮನೆ ಕಟ್ಟದ ನಿವೇಶನಗಳಲ್ಲಿ ಗಿಡಗಳು ಬೆಳೆದು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದರು.
ನಗರದ ಹೊರವಲಯದ ಗೋಪಶೆಟ್ಟಿಕೊಪ್ಪ ಗ್ರಾಮದ ವಿವಿಧ ಸ.ನಂ.ಗಳ 104 ಎಕರೆ ಭೂಪ್ರದೇಶದ ಪೈಕಿ ಶೇ. 50:50ರ ಅನುಪಾತದಲ್ಲಿ ಒಪ್ಪಿಗೆ ಸೂಚಿಸಿ ರುವ 30 ಎಕರೆ ಜಮೀನನ್ನು ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದ್ದು, ಸರ್ಕಾರದ ಪೂರ್ವಾನುಮೋದನೆ ಗಾಗಿ ಸಲ್ಲಿಸಲಾಗಿದೆ ಎಂದರು.
ಊರಗಡೂರಿನ ವಸತಿ ಬಡಾವಣೆಯಲ್ಲಿ ೪ ಎಕರೆ ಪ್ರದೇಶ ದಲ್ಲಿ ಮತ್ತು ಸೋಮಿನ ಕೊಪ್ಪದಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಸೌಲಭ್ಯಗಳ ನ್ನೊಳಗೊಂಡ ಅಪಾರ್ಟ್ಮೆಂಟ್ ಗಳನ್ನು ರೂ. 10 ಲಕ್ಷಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಿಕ್ ಕಾಲೇಜು ಪಕ್ಕದಲ್ಲಿ ರೂ. 10 ಕೋಟಿ ಅಂದಾಜು ಮೊತ್ತದಲ್ಲಿ ಮಾಲ್ ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಹೆಚ್ ಪಟೇಲ್ ಬಡಾವಣೆಯ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿಯೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಶಿವಮೊಗ್ಗ ನಗರದ ಯೋಜನಾ ಪ್ರದೇಶದ 320.00 ಲಕ್ಷಗಳ ವೆಚ್ಚದಲ್ಲಿ ವ್ಯಾಪ್ತಿಯಲ್ಲಿ 4 ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ5 ಕೋಟಿ ರೂ. ವೆಚ್ಚದಲ್ಲಿ 22 ಕೆರೆಗಳನ್ನು ಅಭಿವೃದ್ಧಿಪಡಿಸಲು ಡಿ.ಪಿ.ಆರ್. ತಯಾರಿಸಲಾಗುತ್ತಿದೆ. ಶಿವಮೊಗ್ಗ ನಗರದ ಹೊರ ವರ್ತುಲ ರಸ್ತೆ ಅಭಿವೃದ್ಧಿಪಡಿಸಲು ಮತ್ತು ಶಿವಮೊಗ್ಗ ನಗರದ ೩ ಮತ್ತು ಭದ್ರಾವತಿ ನಗರದ 3 ವೃತ್ತಗಳನ್ನು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪ್ರಾಧಿಕಾರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 60 ಮೀ. ಅಗಲದ ಹೊರವರ್ತುಲ ರಸ್ತೆಯನ್ನು ರೂ. 500 ಲಕ್ಷಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದರು.ಪ್ರಾಧಿಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ವಸತಿ ಬಡಾವಣೆಯಲ್ಲಿ ಹೊಸ ಕಛೇರಿ ಕಟ್ಟಡವನ್ನು ರೂ. 10 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಪತ್ರಿಕಾಗೋಷ್ಟಿಯಲ್ಲಿ ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸದಸ್ಯರಾದ ರವಿ ಕುಮಾರ್. ಹೆಚ್. ಚನ್ನಪ್ಪ ಮತ್ತಿತರರಿದ್ದರು.