
ಶಿವಮೊಗ್ಗ:- ಮಲೆನಾಡಿನ ಹಸಿರಿವ ವನರಾಶಿಯ ಕಣಿವೆ ಪ್ರದೇಶದಲ್ಲಿ ಹರಿಯುವ ಶರಾವತಿ ನದಿಯ ಹರಿವಿನಿಂದಾಗಿ ಲಿಂಗನ ಮಕ್ಕಿ ಅಣೆಕಟ್ಟು ವಾಡಿಕೆಗಿಂತ ಮೊದಲೇ ಭರ್ತಿಯಾಗುವತ್ತ ಸಾಗಿದೆ. ಗರಿಷ್ಠ 1819 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಪ್ರಸ್ತುತ 1816.20 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ ೪೮,೩೯೩ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ಕಳೆದ 24 ಗಂಟೆಯಲ್ಲಿ ಸುರಿದ ಮಳೆಗೆ ಜಲಾಶಯದ ನೀರಿನ ಮಟ್ಟ 1.5 ಅಡಿಗೂ ಹೆಚ್ಚಿಗೆ ಏರಿಕೆ ಕಂಡಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತ ಕ್ರಮವಾಗಿ ನದಿಯ 11 ರೇಡಿಯಲ್ ಕ್ರೆಸ್ಟ್ ಗೇಟ್ ಗಳ ಮೂಲಕ 15 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.
ನದಿಯ ಅಚ್ಚುಕಟ್ಟು ಪ್ರದೇಶದ ಜನರಿಗೆ ನದಿಗೆ ಜನ ಜಾನುವಾರು ಇಳಿಯದಂತೆ ಕಳೆದ ಒಂದು ತಿಂಗಳಿನಿಂದ ಕೆಪಿಸಿ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ. ಲಿಂಗನಮಕ್ಕಿ ಜಲಾಶಯದಿಂದ ನೀರು ಬಿಟ್ಟ ಎರಡು ಗಂಟೆ ಬಳಿಕ ಜೋಗ ಜಲಪಾತ ತಲುಪಲಿದೆ. ಇದರಿಂದಾಗಿ ಜೋಗ ಜಲಪಾತದ ಜಲಧಾರೆಗಳು ಭೋರ್ಗರೆಯುತ್ತ ಪ್ರಪಾತಕ್ಕೆ ಧುಮುಕಲಿದೆ. ಹೀಗಾಗಿ ಜೋಗ ಜಲಪಾತದ ಸೌಂದರ್ಯ ಸವಿಯುವುದೇ ಒಂದು ವಿಶೇಷವಾಗಿದೆ.
ಅಪಾಯಮಟ್ಟಕ್ಕೆ ತಲುಪಿದ ತುಂಗೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾನದಿಯು ಅಪಾಯದ ಮಟ್ಟ ತಲುಪಿದೆ. ನಿನ್ನೆತುಂಗಾ ಜಲಾಶಯದಿಂದ ಬರೋಬ್ಬರಿ 79 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ನದಿಗೆ ಹರಿದು ಬರುತ್ತಿತ್ತು,. ನಿನ್ನೆ ಇಡೀ ದಿನ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನೂ ಕಳೆದ 8 ಗಂಟೆಯ ಹಿಂದಿನ ಮಾಹಿತಿ ಪ್ರಕಾರ, ಕೇಂದ್ರ ಜಲ ನಿಗಮ ತನ್ನಮಾಹಿತಿಯನ್ನು ಬಿಡುಗಡೆ ಮಾಡಿದ್ದು ಪ್ರಸ್ತುತ ತುಂಗಾ ನದಿ 558 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, 560 ಮೀಟರ್ ಅಪಾಯದ ಮಟ್ಟವಾಗಿದೆ. ಇನ್ನೂ ಹೀಗೆ ಮಳೆ ಮುಂದುವರಿದರೆ, ತಗ್ಗುಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.
ಮುಳುಗಿದ ಮಂಟಪ, ನದಿಪಾತ್ರದಲ್ಲಿ ಆತಂಕ
ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಜಲಾವೃತವಾಗಿದೆ. ಇನ್ನು, ನದಿ ಪಾತ್ರದಲ್ಲಿ ವಾಸಿಸುತ್ತಿರುವ ಶಿವಮೊಗ್ಗ ನಗರದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಮತ್ತಷ್ಟು ಪ್ರಮಾಣದ ನೀರನ್ನು ಜಲಾಶಯದಿಂದ ಹೊಳೆಗೆ ಹರಿಸಿದರೆ ಬಡಾವಣೆಗಳು, ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಇದರೊಂದಿಗೆ ತುಂಗಾನದಿ ತುಂಬಿದ ಹಿನ್ನೆಲೆ ಕೋಟೆ ರಸ್ತೆಯ ಕೋರ್ಪಲಯ್ಯ ಛತ್ರ ಬಳಿಯ ನದಿಗೆ ಸಾವಿರಾರು ಸಂಖ್ಯೆಯಲ್ಲಿ ಜನರು ತೆರಳಿ ನದಿಯ ಸೌಂದರ್ಯ ವೀಕ್ಷಿಸುತ್ತಿದ್ದಾರೆ.
ಹೊಸನಗರದಲ್ಲಿ 200 ಮಿ.ಮೀಗಿಂತ ಹೆಚ್ಚು ವರ್ಷಧಾರೆ
ಹೊಸನಗರ: ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ, ಕೆಲವೆಡೆ ವರುಣ ಬಿಡುವು ಕೊಡದೇ ಅಬ್ಬರಿಸುತ್ತಿದ್ದಾನೆ. ಕಳೆದ 24 ಗಂಟೆಯಲ್ಲಿ ಹಲವಡೆ 200 ಮಿ.ಮೀ.ಗಿಂತಲು ಹೆಚ್ಚಿನ ಮಳೆಯಾಗಿದೆ.
ಹೊಸನಗರ ತಾಲೂಕಿನ ಮಾನಿ ವ್ಯಾಪ್ತಿಯಲ್ಲಿ 238 ಮಿ.ಮೀ ಮಳೆಯಾಗಿದೆ. ಯಡೂರಿನಲ್ಲಿ 200 ಮಿ.ಮೀ, ಹುಲಿಕಲ್‌ನಲ್ಲಿ 220 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 204 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 150 ಮಿ.ಮೀ, ಸಾವೇಹಕ್ಲು ಭಾಗದಲ್ಲಿ 179 ಮಿ.ಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ
ಭಾರಿ ಮಳೆಯಿಂದಾಗಿ ಹೊಸನಗರ ಭಾಗದ ಜಲಾಶಯಗಳ ಒಳ ಹರಿವು ಏರಿಕೆಯಾಗಿದೆ. ಮಾನಿ ಡ್ಯಾಂಗೆ 9353 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಪಿಕಪ್ ಡ್ಯಾಂಗೆ 3725 ಕ್ಯೂಸೆಕ್, ಚಕ್ರಾ 3623 ಕ್ಯೂಸೆಕ್, ಸಾವೇಹಕ್ಲು 3226 ಕ್ಯೂಸೆಕ್ ಒಳ ಹರಿವು ಇದೆ.
ಐತಿಹಾಸಿಕ ಬಿದನೂರು ಕೋಟೆಯ ಒಂದು ಭಾಗ ಕುಸಿತ

ಹೊಸನಗರ ತಾಲ್ಲೂಕಿನ ಐತಿಹಾಸಿಕ ಬಿದನೂರು ಕೋಟೆಯ ಒಂದು ಭಾಗ ಕುಸಿದಿದೆ. ಕೋಟೆಯ ಮಹಾದ್ವಾರದಿಂದ ಒಳಗೆ ಪ್ರವೇಶಿಸುವ ಮಾರ್ಗದಲ್ಲಿ, ರಾಜದರ್ಬಾರ್ ಅಂಗಳಕ್ಕೆ ಹೋಗುವ ದಾರಿಯಲ್ಲಿ ಬಲಭಾಗದಲ್ಲಿದ್ದ ಕೊಳದ ದಂಡೆಯು ಕುಸಿದಿದೆ.