ತೀರ್ಥಹಳ್ಳಿ :- ಕ್ಯಾನ್ಸರ್ ಎನ್ನುವುದು ಒಂದು ಚಿಕಿತ್ಸೆ ಕೊಡಬಹುದಾದ ಕಾಯಿಲೆಯಾಗಿದ್ದು, ಕ್ಯಾನ್ಸರ್ ಬಂದವರು ಭಯಪಡದೆ ಕಾಯಿಲೆಯನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡು ಚಿಕಿತ್ಸೆಗೆ ಸ್ಪಂದಿಸಿದರೆ ಉತ್ತಮ ಫಲಿತಾಂಶಗಳು ಸಾಧ್ಯ ಎಂದು ಬೆಂಗಳೂರಿನ ಮೆಡಿಕಲ್ ಆಂಕಾಲಿಜಿಸ್ಟ್, ಆಸೋಸಿಯೇಟ್ ಪ್ರೊಫೆಸರ್, ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ.ಎಲ್.ಕೆ. ರಾಜೀವ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಆರಗ ಗೇಟ್ ಗ್ರಾಮದ ಹತ್ತಿರವಿರುವ ಎಂ.ಐ.ಒ. ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿನ್ನೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಮಾಜದ ಪಾತ್ರ ಎನ್ನುವ ವಿಷಯದ ಕುರಿತಾಗಿ ಜರಗಿದ ಸ್ವಯಂ ಸೇವಕರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ. ರಾಜೀವ್ ಅವರು, ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸಾ ಸೌಲಭ್ಯಗಳ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು, ಅದರಲ್ಲೂ ಕರ್ನಾಟಕ ಬಹಳ ಮುಂದಿದೆ. ಕ್ಯಾನ್ಸರ್ ತಪಾಸಣೆಯ ಪೆಟ್ ಸ್ಕ್ಯಾನ್ ಸೌಲಭ್ಯ ಇಲ್ಲಿ ಸಾಕಷ್ಟು ಲಭ್ಯವಿದೆ. ಮುಂದುವರಿದ ಐರೋಪ್ಯ ರಾಷ್ಟ್ರಗಳಲ್ಲಿಯೂ ಕೂಡ ಇಷ್ಟೊಂದು ಸೌಲಭ್ಯಗಳಿಲ್ಲ ಎಂದರು.
ಕ್ಯಾನ್ಸರ್ ಕಾಯಿಲೆಯು ಯಾರಿಗೂ ದ್ಢೀರನೇ ಬರುವುದಿಲ್ಲ. ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲದಿಂದ ಹೊಗೆಸೊಪ್ಪು ಸೇವನೆ ಮತ್ತು ಧೂಮಪಾನ ಮಾಡುವವರು ಕನಿಷ್ಟ ವರ್ಷಕ್ಕೊಮ್ಮೆ ಗಂಟಲು ಮತ್ತು ಬಾಯಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ನ ಆರಂಭದ ಹಂತದಲ್ಲಿಯೇ ರೋಗ ಪತ್ತೆ ಹಚ್ಚಿದರೆ ಗುಣಪಡಿಸುವ ಹೆಚ್ಚಿನ ಅವಕಾಶಗಳಿರುತ್ತವೆ. ನಿಯಮಿತ ವೈದ್ಯಕೀಯ ಪರೀಕ್ಷೆ, ಉತ್ತಮವಾದ ಜೀವನ ಶೈಲಿ, ಆಹಾರ ಸೇವನೆಯಲ್ಲಿ ಮಿತವ್ಯಯ, ನಿದ್ದೆ , ವ್ಯಾಯಾಮದ ಅಭ್ಯಾಸವಿರುವ ವ್ಯಕ್ತಿಗಳಿಗೆ ಕ್ಯಾನ್ಸರ್ ಬರುವ ಸಂಭವ ಕಡಿಮೆಯಿರುತ್ತದೆ. ಮಾತ್ರವಲ್ಲ ಒಂದು ವೇಳೆ ಬಂದರೂ ಇಂತವರಲ್ಲಿ ಚೇತರಿಕೆಯ ಪ್ರಮಾಣ ಚೆನ್ನಾಗಿರುತ್ತದೆ ಎಂದು ಡಾ. ರಾಜೀವ್ ವಿವರಿಸಿದರು.
ಕ್ಯಾನ್ಸರ್ ಬೇರು, ನಾರುಗಳಿಂದೆಲ್ಲ ವಾಸಿಯಾಗುತ್ತದೆ ಎನ್ನುವುದು ಒಂದು ಭ್ರಮೆಯಾಗಿದ್ದು, ಕ್ಯಾನ್ಸರ್ ಕಾಯಿಲೆಗೆ ನಿರಂತರವಾಗಿ ೬ ತಿಂಗಳುಗಳ ಚಿಕಿತ್ಸೆಯಿಂದ ಕಷ್ಟದ ಪರಿಸ್ಥಿತಿಯಿದ್ದರೂ, ಆಮೇಲೆ ಜೀವನ ಪೂರ್ತಿ ಆರಾಮವಾಗಿರಬಹುದು. ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವಾಗ ಕೆಲವು ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಕೂದಲು ಉದುರುವುದು, ಚರ್ಮ ಕಪ್ಪಾಗುವುದು ಇತ್ಯಾದಿ. ಆದರೆ ಇದರಿಂದ ಭಯಪಡಬಾರದು. ಚಿಕಿತ್ಸೆಯ ನಂತರ ತಲೆಕೂದಲು ಇನ್ನಷ್ಟು ದಟ್ಟವಾಗಿ ಬರುವ ಸಾಧ್ಯತೆ ಇರುತ್ತದೆ ಎಂದು ರಾಜೀವ್ ಹೇಳಿದರು.
ಸಮಾಜದಲ್ಲಿ ನಡೆಯುವ ಅನಿಷ್ಟಗಳ ಕುರಿತು ಹೇಳುವಾಗ ’ ಇದೊಂದು ಕ್ಯಾನ್ಯರ್ ಇದ್ದ ಹಾಗೆ’ ಎನ್ನುವ ನಕಾರತ್ಮಕ ಹೋಲಿಕೆಗಳನ್ನು ಕೊಡುವುದನ್ನು ದಯಮಾಡಿ ಮಾಡಬೇಡಿ ಎಂದು ನುಡಿದ ಡಾ. ರಾಜೀವ್ ಅವರು, ಒಂದು ಕಾಲದಲ್ಲಿ ಶ್ವಾಸಕೋಶ ಕ್ಯಾನ್ಸರ್ ಬಂದ ವ್ಯಕ್ತಿ ಜಸ್ತಿ ಕಾಲ ಇರುವುದಿಲ್ಲವೆಂಬ ವಾತಾವರಣವಿತ್ತು. ಆದರೆ ಈಗ ಶ್ವಾಸಕೋಶದ ಕ್ಯಾನ್ಸರ್ ಆದವರು ಕೂಡ ಸಾಕಷ್ಟು ವರ್ಷ ಹೆಚ್ಚು ಬದುಕುವ ವ್ಯೆದ್ಯಕೀಯ ಸೌಲಭ್ಯವಿದೆ. ಒಟ್ಟಿನಲ್ಲಿ ಸಾವಿನಲ್ಲೂ ಒಂದು ಘನತೆ (ಈಜಿಜ್ಞಜಿಠಿqs ಜ್ಞಿ bಛಿZಠಿe)ಇರಬೇಕು ಎಂಬುದೇ ಚಿಕಿತ್ಸೆಯ ಉದ್ದೇಶ ಎಂದರು.
ಮಲೆನಾಡಿನ ಈ ಹಳ್ಳಿಯಲ್ಲಿ ಲಕ್ಷಾಂತರ ರೂ.ಗಳ ಬಂಡವಾಳ ಹೂಡಿ ಇಂತಹ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ ಮಾಡಿರುವ ಡಾ. ಸುರೇಶ್ ಅವರ ಧೈರ್ಯ, ಸಾಹಸವನ್ನು ಮೆಚ್ಚಲೇಬೇಕು ಎಂದು ಡಾ. ರಾಜೀವ್ ಅವರು ಪ್ರಶಂಸಿದರು.
ಮತ್ತೊಬ್ಬರು ಸಂಪನ್ಮೂಲ ವ್ಯಕ್ತಿ ಡಾ.ಅನುಸೂಯ ಡಿ.ಎಸ್., ಎಂ.ಡಿ., ಜನರಲ್ ಮೆಡಿಸಿನ್, ಅಸೋಸಿಯೇಟ್ ಪ್ರೊಫೆಸರ್, ಸೇಂಟ್ ಜನ್ಸ್ ಮೆಡಿಕಲ್ ಆಸ್ಪತ್ರೆ, ಬೆಂಗಳೂರು ಅವರು ಮಾತನಾಡಿ, ಕಾಯಿಲೆಗೆ ತುತ್ತಾದ ವ್ಯಕ್ತಿಗಳನ್ನು ಅದರಲ್ಲೂ ಹಿರಿಯರನ್ನು ಚೆನ್ನಾಗಿ ಆರೈಕೆ ಮಾಡುವ ಗುಣಗಳನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಏಕೆಂದರೆ ಸಾಮಾನ್ಯವಾಗಿ ವಯಸ್ಸಾದವರಿಗೇ ಕಾಯಿಲೆಗಳು ಜಸ್ತಿ ಬರುವಂತದ್ದು ಆಗಿರುತ್ತದೆ. ಹೀಗಾಗಿ ಈ ವಿಷಯದಲ್ಲಿ ಸಾಮಾಜಿಕ ಕಳಕಳಿ, ಮತ್ತು ಜಗೃತಿ ಬಹಳ ಮುಖ್ಯ ಎಂದು ತಿಳಿಸಿದರು.
ಹಳೆಯ ಬೇರೆ ಕಾಯಿಲೆಗಳಿಂದ ಉಂಟಾದ ಸೋಂಕುಗಳಿಂದ ಮತ್ತು ವಿಪರೀತ ಆಂಟಿ ಬಯೋಟಿಕ್ ಮದ್ದುಗಳನ್ನು ಸೇವಿಸುವುದರಿಂದಲೂ ಕ್ಯಾನ್ಸರ್ ಬರಬಹುದು. ಈ ಬಗ್ಗೆ ಎಚ್ಚರವಿರಲಿ. ಮನುಷ್ಯನ ಹಲ್ಲುಗಳು ಮಾಂಸಹಾರಕ್ಕೆ ಪೂರಕವಾಗಿಲ್ಲ. ಇದು ಗಮನದಲ್ಲಿರಲಿ. ಜೊತೆಗೆ ಹೆಚ್ಚೆಚ್ಚು ಪರಿಸರದ ತಾಜ ಉತ್ಪನ್ನಗಳನ್ನೇ ಬಳಸುವುದು ಒಳಿತು. ಉತ್ತಮ ಜೀವನ ಶೈಲಿ, ರಾತ್ರಿಯ ಉತ್ತಮ ನಿದ್ದೆ , ವ್ಯಾಯಾಮಗಳು ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಾ.ಅನುಸೂಯ ಹೇಳಿದರು.
ಕಾರ್ಯಾಗಾರದಲ್ಲಿ ಡಾ. ಪ್ರತಿಮಾ ಸುರೇಶ್ ಡಿ.ರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ದುರ್ಗಾದಾಸ್ ಅಡಪ ಹಾಗೂ ಸಿಬ್ಬಂಧಿಯವರು ಉಪಸ್ಥಿತರಿದ್ದರು. ಪತ್ರಕರ್ತ ಮತ್ತು ತೀರ್ಥಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಆಸ್ಪತ್ರೆಯ ನಿರ್ದೇಶಕ ಮತ್ತು ಹಿರಿಯ ಕ್ಯಾನ್ಸರ್ ತಜ್ಞರಾದ ಡಾ. ಡಿ. ಸುರೇಶ್ ರಾವ್ ಮಾತನಾಡಿದರು. ಸಮಾಜ ಸೇವಕ ಅ.ನಾ. ವಿಜೇಂದ್ರರಾವ್ ಸ್ವಾಗತಿಸಿದರು. ಜ್ಯೋತಿ ನಿರೂಪಿಸಿ, ನೀತಾ ವಂದಿಸಿದರು.