
ಶಿವಮೊಗ್ಗ :- ಪಕ್ಷದಲ್ಲಿ ದುಡಿದವರನ್ನು ಗುರುತಿಸಿ ಮುಂದೆ ತರಲು ನಿರಂತರ ಪ್ರವಾಸ ಅಗತ್ಯ. ಇದು ಒಂದು ದಿನದ ಪ್ರವಾಸ ಅಲ್ಲ ಮತ್ತು ಚುನಾವಣೆ ಬಂದಾಗ ಮಾಡುವ ಪ್ರವಾಸವೂ ಅಲ್ಲ, ಪಕ್ಷ ಸಂಘಟನೆಗಾಗಿ ಕನಿಷ್ಠ 50 ಲಕ್ಷ ಸದಸ್ಯರನ್ನು ಮಾಡುವ ಗುರಿಯೊಂದಿಗೆ ಈ ಪ್ರವಾಸ ಹಮ್ಮಿಕೊಂಡಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ.
ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನಗರ ಜೆಡಿಎಸ್ ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ಎಲ್ಲಿ ಸುಲಭವಾಗಿ ಮುಂದಿನ ಚುನಾವಣೆ ಗೆಲುವು ಸಾಧ್ಯ, ಅಲ್ಲಿ ಮಾತ್ರ ಪ್ರವಾಸ ಮಾಡುತ್ತೇನೆ ಎಂಬುದು ಸುಳ್ಳು. ಯಾವ ಕಾರಣಕ್ಕೂ ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಸಾರ್ವತ್ರಿಕ ಚುನಾವಣೆ ದೂರ ಇದೆ. ಈಗಲೇ ಯಾಕೆ ಪ್ರವಾಸ ಎಂದು ಕೆಲವರು ಕೇಳುತ್ತಾರೆ. ಮುಂದೆ ಗ್ರಾಮ ಪಂಚಾಯ್ತಿ, ಜಿಪಂ, ತಾಪಂ, ಮಹಾನಗರ ಪಾಲಿಕೆ ಚುನಾವಣೆ ನಿರೀಕ್ಷೆ ಇದೆ. ಎಲ್ಲಾ ಚುನಾವಣೆಗೂ ಪಕ್ಷ, ಪಕ್ಷದ ವರಿಷ್ಠರಾಗಲೀ ಬೆಂಬಲ ಕೊಡುತ್ತೇವೆ. ನಮ್ಮ ಮುಂದೆ ಒಂದೇ ಸವಾಲು, ಒಂದೇ ಗುರಿ ಇದೆ. ದೇವೇಗೌಡರ ಕೊಡುಗೆ, ಕುಮಾರಣ್ಣ ಸಾಧನೆ ನೋಡಿದ್ದೇವೆ. ಆದರೂ ಜೆಡಿಎಸ್ನಿಂದ ಶಾಸಕರಾಗಿ ಯಾಕೆ ಹೊರಬರಲು ಆಗಿಲ್ಲ ಎಂದು ಪ್ರಶ್ನೆ ಇದೆ ಎಂದರು.
ಕಳೆದ ಎರಡು ವರ್ಷದಿಂದ ಜನರು ಸರ್ಕಾರದ ಆಡಳಿತ ವೈಖರಿ ನೋಡುತ್ತಾ ಇದ್ದಾರೆ. ಐದು ಗ್ಯಾರಂಟಿ ಕೊಟ್ಟಿದ್ದಾರೆ. ಅದನ್ನು ರಾಜ್ಯದಲ್ಲಿ ಸಮರ್ಪಕವಾಗಿ ನೀಡಲು ಆಗಿದೆಯಾ? ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿ ತಿಂಗಳೂ ಗೃಹಲಕ್ಷ್ಮಿ, ಯುವನಿಧಿ ಕೊಡುತ್ತೇವೆ ಎಂದಿದ್ದರು. ನಂತರ ಯಾವಾಗ ತಿಂಗಳ ತಿಂಗಳ ಹಣ ಕೊಡುತ್ತೇವೆ ಎಂದು ಹೇಳಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ಇಂತಹ ಪರಿಸ್ಥಿತಿ ರಾಜ್ಯದ ಜನರಿಗೂ ಅರಿವಿದೆ. ಕುಡಿಯೋ ಗಾಳಿ ಬಿಟ್ಟು ಉಳಿದೆಲ್ಲದರ ಮೇಲೆ ತೆರಿಗೆ ಹಾಕಿದ್ದಾರೆ. ಸಣ್ಣಪುಟ್ಟ ಬೇಕರಿ ವ್ಯಾಪಾರಿಗಳ ಮೇಲೂ ಹೊಸದಾಗಿ ಜಿಎಸ್ಟಿ ಹಾಕಬೇಕು ಎಂದು ಭಾರ ಹೊರಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಸಮಾಜವಾದಿ, ಚಾಂಪಿಯನ್ ಲೀಡರ್ ಎಂದು ಹೇಳುತ್ತಾರೆ. ಆದರೆ ಗ್ಯಾರಂಟಿಗಾಗಿ ಕಾರ್ಮಿಕ ನಿಧಿ ಹಣ, ಎಸ್ಸಿಪಿ-ಟಿಎಸ್ಪಿ ಹಣ, ವಾಲ್ಮೀಕಿ ಸಮುದಾಯ ಅಭಿವೃದ್ಧಿ ಹಣ ದೋಚಿದ್ದಾರೆ. ಸಿಎಂ ಕೂಡ 90 ಕೋಟಿ ದುರ್ಬಳಕೆ ಒಪ್ಪಿದ್ದಾರೆ ಎಂದರು.
ನಿಜವಾದ ಸಬಲೀಕರಣಕ್ಕೆ ಅರ್ಥ ಕೊಟ್ಟವರು ದೇವೇಗೌಡರು. ಸ್ಥಳೀಯ ಚುನಾವಣೆಯಲ್ಲಿ ಅತಿ ಹೆಚ್ಚು ಮಹಿಳೆಯರು ನಿಲ್ಲಬೇಕು ಎಂದು ಶೇ.೫೦ ಮೀಸಲು ಕೊಟ್ಟವರು ದೇವೇಗೌಡರು. 1996 ರಲ್ಲಿ ವಿದೇಯಕ ಬಿದ್ದು ಹೋಗಿತ್ತು. ಈಗ ಪ್ರಧಾನಿ ಮೋದಿ ಅವರು ಅವಕಾಶ ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಕೆ.ಬಿ. ಪ್ರಸನ್ನಕುಮಾರ್ರವರಿಗೆ ಶಿವಮೊಗ್ಗ ನಗರ ಶಾಸಕರಾಗುವ ಯೋಗಬರಲಿದೆ ಎಂದರು.
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನ ಕುಮಾರಸ್ವಾಮಿ ಕನಸು. ಅದಕ್ಕೆ ಪೂರಕವಾಗಿ ಸರಣಿ ಸಭೆ ಮಾಡಿದ್ದಾರೆ. ಡಿಪಿಆರ್ ರೆಡಿ ಮಾಡಿಸಿದ್ದಾರೆ. ಕಾರ್ಖಾನೆಗೆ ಹೊಸ ರೂಪ ಕೊಡುವುದು ನಿಶ್ಚಿತ ಎಂದು ನಿಖಿಲ್ ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ನಗರ ಅಧ್ಯಕ್ಷ ದೀಪಕ್ ಸಿಂಗ್, ಶಾಸಕಿ ಶಾರದಾ ಪೂರ್ಯಾನಾಯ್ಕ, ಪರಿಷತ್ ಸದಸ್ಯ ಭೋಜೇಗೌಡ, ಮಹಿಳಾ ಮೋರ್ಚಾ ರಾಜಧ್ಯಕ್ಷೆ ಲಕ್ಷ್ಮಿಗೌಡ, ನರಸಿಂಹ ಗಂಧದಮನೆ, ತ್ಯಾಗರಾಜ್, ಗೀತಾಸತೀಶ್, ಮಧು, ರಾಮಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.
