google.com, pub-9939191130407836, DIRECT, f08c47fec0942fa0

ಶಿವಮೊಗ್ಗ: ನೇಪತ್ಯಕ್ಕೆ ಸರಿದುಹೋಗಬಹುದಾಗಿದ್ದ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ರಾವ್ ಬಹದ್ಧೂರ್ ಡಾ. ಫ. ಗು. ಹಳಕಟ್ಟಿಯವರು ಎಂದು ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.

ಶಿವಮೊಗ್ಗದ ಬಸವಕೇಂದ್ರದಲ್ಲಿ ಆಯೋಜಿಸಿದ್ದ ೩೦೫ನೇ ಶರಣ ಸಂಗಮ ಹಾಗೂ ಡಾ. ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ವಚನ-ವಚನಕಾರರು ಮತ್ತು ಕನ್ನಡದ ಸಂಶೋಧನೆ, ಪ್ರಕಟಣೆಗೆ ತಮ್ಮ ಜೀವಮಾನವನ್ನೇ ಬಳಸಿದವರು. ಬದುಕಿಡೀ ಗಂಧದ ಕೊರಡಿನಂತೆ ವಚನ ಸಾಹಿತ್ಯ- ಸಂಸ್ಕೃತಿಗಾಗಿ, ಸಮಾಜದ ಅಭ್ಯುದಯಕ್ಕಾಗಿ, ಕನ್ನಡದ ಏಳ್ಗೆಗಾಗಿ ತಮ್ಮನ್ನೇ ಸವೆಸಿಕೊಂಡ ಮಹಾನ್ ವ್ಯಕ್ತಿ ಫ.ಗು. ಹಳಕಟ್ಟಿ ಅವರು ಎಂದು ವಿಶ್ಲೇಷಿಸಿದರು.

ವಚನ ಸಾಹಿತ್ಯದ ಕಾರ್ಯದ ಜೊತೆಗೆ ಬಿಡುವಾದಾಗಲೆಲ್ಲ ಹಲವು ಸಂಘ ಸಂಸ್ಥೆಗಳನ್ನು, ಸಹಕಾರ ಸಂಘಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಬಹುಪಾಲು ಸಂಸ್ಥೆಗಳು ಇಂದು ಶತಮಾನೋತ್ಸವ ಆಚರಿಸಿಕೊಂಡಿವೆ ಎಂದರು.

ಕರ್ನಾಟಕ ಏಕೀಕರಣದ ರೂವಾರಿಗಳಲ್ಲೊಬ್ಬರಾಗಿದ್ದ ಅವರು ಪ್ರತಿಭಾವಂತ ವಕೀಲರೂ ಆಗಿದ್ದರು. ಸರಕಾರಿ ಅಭಿಯೋಜಕ ರಾಗಿದ್ದ ಅವರು ಅದರಲ್ಲೇ ಮುಂದುವರಿದಿದ್ದರೆ ಭಾರತೀಯ ನ್ಯಾಯಾಂಗದ ಅತ್ಯುನ್ನತ ಸ್ಥಾನವಾದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗುತ್ತಿದ್ದರು. ಆ ಮೂಲಕ ಸರ್ವೋಚ್ಛ ನ್ಯಾಯಾಲಯದ ಮೊದಲ ಕನ್ನಡಿಗ ನ್ಯಾಯಮೂರ್ತಿ ಆಗುವ ಅವಕಾಶ ಇತ್ತು. ಇಂತಹ ಅವಕಾಶಗಳನ್ನು ಬಿಟ್ಟು ಶ್ರೀಗಂಧದ ವೃಕ್ಷವು ಊರೊಳಗಿದ್ದಡೇನು, ಅಡವಿಯೊಳಗಿದ್ದಡೇನು? ಪರಿಮಳವೊಂದೇ? ಎಂಬ ಬಸವಣ್ಣ ನವರ ನುಡಿ ಹಳಕಟ್ಟಿಯಂಥ ಶರಣರಿಗೆ ಅನ್ವಯವಾಗುವಂಥದ್ದು ಎಂದು ಹೇಳಿದರು.

ಫ.ಗು.ಹಳಕಟ್ಟಿಯವರು ಬದುಕು- ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರಕಾಶ ಗಿರಿಮಲ್ಲನವರ್, ವಚನ ಸಾಹಿತ್ಯದ ಪ್ರಚಾರಕ್ಕಾಗಿಯೇ ಶಿವಾನುಭವ ಪತ್ರಿಕೆ ಪ್ರಕಟ ಮಾಡಿದ ಹಳಕಟ್ಟಿ ಅವರು ಇಡೀ ಸಮುದಾಯಕ್ಕೆ ಬೆಳಕಿನಂತೆ ಕಂಡು ಬಂದರು.

ಬ್ರಿಟೀಷ್ ಸರ್ಕಾರದಿಂದ ಅನೇಕ ಗೌರವಗಳನ್ನು ಪಡೆದ ಅಪರೂಪದ ಕನ್ನಡಿಗರಾಗಿದ್ದ ಅವರು, ವಚನ ಸಾಹಿತ್ಯಕ್ಕೆ ಮರುಜೀವ ನೀಡಿದರು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎನ್. ನಾಗರಾಜ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹಾರುದ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *