google.com, pub-9939191130407836, DIRECT, f08c47fec0942fa0


ಶಿವಮೊಗ್ಗ :- ಹಿರಿಯ ರಾಜಕಾರಣಿ, ಮಾಜಿ ಉಪಉಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ 77ನೇ ವರ್ಷದ ಹುಟ್ಟು ಹಬ್ಬವನ್ನು ನಗರದ ಹೆಸರಾಂತ ಸಾಂಸ್ಕೃತಿಕ ಸಂಸ್ಥೆ ಶ್ರೀಗಂಧ ವತಿಯಿಂದ ಜೂನ್ 10 ಮತ್ತು 11ರಂದು ಎರಡು ದಿನಗಳ ಕಾಲ ಹೋಮ, ಹವನ, ಯಾಗಗಳ ಜೊತೆಗೆ ಧಾರ್ಮಿಕ ಸಭೆ ಮತ್ತು ಪ್ರತಿಭಾಪುರಸ್ಕಾರಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಯಕ್ರಮದ ರೂವಾರಿಗಳು ಆದ ವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ.ಜೆ. ರಾಮಚಂದ್ರ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿರಿಯರಾದ ಕೆ.ಎಸ್. ಈಶ್ವರಪ್ಪನವರು ಕೇವಲ ರಾಜಕಾರಣವಲ್ಲದೆ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರವೂ ಸೇರಿ ಎಲ್ಲಾ ರಂಗಗಳಲ್ಲೂ ತಮ್ಮದೆ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಕೆ.ಎಸ್. ಈಶ್ವರಪ್ಪನವರ ಹುಟ್ಟು ಹಬ್ಬವನ್ನು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈಶ್ವರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ಜೂನ್ ೧೦ ರಂದು ನಡೆಯುವ ಶತ ಚಂಡಿಕಾ ಯಾಗದ ಕುರಿತು ಶನೈಶ್ವರ ದೇವಸ್ಥಾನದ ಪ್ರಧಾನ ಆರ್ಚಕ ಸಂದೇಶ್‌ಉಪಾಧ್ಯ ಅವರು ಮಾಹಿತಿ ನೀಡಿದರು. ಜೂ. 10ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಹಸ್ರ ಚಂಡಿಕಾ ಯಾಗ, ಮಹಾರುದ್ರ ಹೋಮಗಳು ನಡೆಯಲಿವೆ. ಸಹಸ್ರ ಚಂಡಿಕಾ ಯಾಗದಲ್ಲಿ 100 ಪಾರಾಯಣ, ಸಾವಿರ ಲೀಟರ್ ಹಾಲಿನ ಅಭಿಷೇಕ, ೩೫ ಕೆ.ಜಿ. ತುಪ್ಪ, 1 ಕ್ವಿಂಟಾಲ್ ಪರಮನ್ನಾ, 1 ಟನ್ ಹಲಸಿನ ಚಕ್ಕೆ ಬಳಕೆ ಮಾಡಲಾಗುವುದು. ಹಾಗೆಯೇ ಅತೀರುದ್ರ ಯಾಗವನ್ನು 200 ಮಂದಿ ಪುರೋಹಿತರು ನಡೆಸಿಕೊಡಲಿದ್ದಾರೆ. ಇದಾದ ಬಳಿಕ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ಇರುತ್ತದೆ. ಇದೇ ವೇಳೆ 1008ಮಹಿಳೆಯರಿಗೆ ಬಾಗಿನ ಅರ್ಪಣೆ ಕಾರ್ಯಕ್ರಮವಿದೆ ಎಂದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, ಹೋಮ, ಹವನ, ಯಾಗದ ಪೂರ್ಣಹುತಿ ನಂತರ ನಡೆಯಲಿರುವ ಧಾರ್ಮಿಕ ಸಭೆಯ ವಿವರ ನೀಡಿದರು. ಈಶ್ವರಪ್ಪನವರು ಗುರುಪರಂಪರೆಯನ್ನು ಅತ್ಯಂತ ಪೂಜಭಾವದಿಂದ ಕಂಡವರು. ನಾಡಿನ ಮಠಾಧೀಶರ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡು ಅವರ ಆಶೀರ್ವಾದದೊಂದಿಗೆ ಧರ್ಮದ ಉಳಿವಿಗೂ ಶ್ರಮಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪನವರು ವಹಿಸಲಿದ್ದಾರೆಂದು ತಿಳಿಸಿದರು.

ಪೇಜವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ಕೂಡ್ಲಿ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಹೊಸದುರ್ಗ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಶಿವಮೊಗ್ಗದ ಆದಿಚುಂಚನಗಿರಿ ಮಠದ ಶ್ರೀ ಸಾಯಿನಾಥ ಸ್ವಾಮೀಜಿಗಳು ಈ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಲಿದ್ದಾರೆಂದರು.

ವಿಶೇಷವಾಗಿ ಕೆ.ಎಸ್. ಈಶ್ವರಪ್ಪನವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವರು. ಬಾಲ್ಯದಿಂದಲೂ ಸಂಘದ ಒಡನಾಟದಲ್ಲಿ ಬೆಳೆದು ಬಂದು ಸಂಘದ ಬೆಳವಣಿಗೆಯಲ್ಲೂ ಅಪಾರವಾಗಿ ದುಡಿದಿದ್ದಾರೆ. ಈಗಲೂ ಸಂಘದ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸಂಘಕ್ಕೆ ಮಂಗಳ ನಿಧಿ ಸಮರ್ಪಣೆ ಮಾಡಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮ ಅಂದು ಮಧ್ಯಾಹ್ನ 12.30ಕ್ಕೆ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು. ರಾಮಣ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಲಿದ್ದಾರೆಂದು ತಿಳಿಸಿದರು.

ಅದೇ ದಿನ ಸಂಜೆ 6 ಗಂಟೆಗೆ ನಡೆಯುವ ಸ್ವಾಭಿಮಾನಿ ಕಾರ್ಯಕ್ರಮದ ಕುರಿತು ಶ್ರೀಗಂಧ ಸಂಸ್ಥೆಯ ಪದಾಧಿಕಾರಿ ವಿನಯ್ ಮಾಹಿತಿ ನೀಡಿದರು. ಈಶ್ವರಪ್ಪನವರು ರಾಷ್ಟ್ರ ಭಕ್ತಿಯಲ್ಲಿ ಮುಂಚೂಣಿಯಲ್ಲಿರುವ ನಾಯಕ. ದೇಶ, ಭಾಷೆ ಅಂದ್ರೆ ಅವರು ಸದಾ ಮುಂದಿದ್ದು, ಶ್ರಮಿಸುತ್ತಾರೆ. ಅದೇ ಕಾರಣಕ್ಕೆ ಅಂದು ಸಂಜೆ 6 ಗಂಟೆಗೆ ಸ್ವಾಭಿಮಾನಿ ಭಾರತ ಎಂಬ ವಿಷಯವಾಗಿ ವಿಶೇಷ ದಿಕ್ಸೂಚಿ ಭಾಷಣ ಕಾರ್ಯಕ್ರಮವಿದ್ದು, ಖ್ಯಾತ ವಾಗ್ಮಿ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿ ಮಗ ಹಾಗೂ ಕೇಸರಿ ಪತ್ರಿಕೆ ಸಂಪಾದಕ ಶೈಲೇಶ್ ತಿಲಕ್ ಆಗಮಿಸುವರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ಪ್ರಹ್ಲಾದ ದೀಕ್ಷಿತ್, ಗುರುಗುಹ ನಾಗರಾಜ್ ಹಾಗೂ ಅರುಣ ಇವರ ತಂಡದವರಿಂದ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ಇರುತ್ತದೆ ಎಂದರು.

ಪ್ರತಿಭಾ ಪುರಸ್ಕಾರದ ಕುರಿತು ಶ್ರೀಗಂಧ ಸಂಸ್ಥೆಯ ರಾಜು ಹಾಗೂ ಶ್ರೀಕಾಂತ್ ಅವರು ಮಾಹಿತಿ ನೀಡಿದರು. ಜೂನ್ ೧೧ರ ಬುಧವಾರ ಸಂಜೆ 6 ಗಂಟೆಗೆ ಪ್ರಸಕ್ತ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 1500 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ರೂ. ೧ಸಾವಿರ ದಂತೆ ವಿದ್ಯಾ ಪ್ರೋತ್ಸಾಹ ನಿಧಿ ನೀಡಿ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಈಶ್ವರಪ್ಪನವರು ವಹಿಸಲಿದ್ದು, ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಲು ಮಹಾರಾಷ್ಟ್ರ ಕೊಲ್ಲಾಪುರದ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು ಹಾಗೂ ಕವಲಗುಡ್ಡ ಗುರುಪೀಠದ ಶ್ರೀ ಅಮರೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಮೂಡಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ ಆಳ್ವ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.

ಗೋಷ್ಠಿಯಲ್ಲಿ ಕೆ.ಈ. ಕಾಂತೇಶ್, ಸುಬ್ರಹ್ಮಣ್ಯ ಭಟ್, ರವೀಂದ್ರ ಭಟ್, ಉಮೇಶ್ ಆರಾಧ್ಯ, ಕೆ.ಜಿ. ಕೃಷ್ಣಾನಂದ, ಟಿ.ಆರ್. ಆಶ್ವತ್ಥ್ ನಾರಾಯಣ ಶೆಟ್ಟಿ, ಸುವರ್ಣ ಶಂಕರ್, ಬಾಲು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *