google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಜೂ. 9ರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಸಮಾನತೆಯ ಸೂರ್ಯ ಪ್ರೊ.ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಹಾಗೂ ರಾಜ್ಯಮಟ್ಟದ ದ.ಸಂ.ಸ. ಪದಾಧಿಕಾರಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್‌ನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಬಂಡಾಯದ ಚರಿತ್ರೆಯಲ್ಲಿ ಮಾನವೀಯತೆ ಮತ್ತು ವೈಚಾರಿಕತೆಗಳ ನಾಡಿನ ಹೋರಾಟದ ಹಾದಿಯಲ್ಲಿ ಎಂದೆಂದಿಗೂ ನೆನಪಾಗುವ ಮೊದಲ ವ್ಯಕ್ತಿ ಪ್ರೊ.ಬಿ. ಕೃಷ್ಣಪ್ಪ ಎಂದರು.

ರಾಜ್ಯದಲ್ಲಿ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಮುನ್ನಡೆಸಿದ ಅವರು, ಭೂಮಿ, ಬಂಡವಾಳ ಮತ್ತು ಅಧಿಕಾರಿಗಳನ್ನು ಪಿತ್ರಾರ್ಜಿತ ಆಸ್ತಿಯಂತೆ ಶತಮಾನಗಳಿಂದಲೂ ಅನುಭವಿಸುತ್ತಾ ಬಡವರ ರಕ್ತ ಹೀರಿದ ಮೇಲ್ಜಾತಿ, ಬಲಾಢ್ಯರ ವಿರುದ್ಧ ಬೀದಿ ಬೀದಿಗಳಲ್ಲಿ ಸಿಂಹದಂತೆ ಗರ್ಜಿಸಿದ ಪ್ರೊ.ಬಿ.ಕೃಷ್ಣಪ್ಪ ಬಡವರನ್ನು, ಧಣಿದವರನ್ನು ದಲಿತರ ಕೇರಿಗಳಲ್ಲಿ ಸಂತೈಸಿದರು. ರಾಜ್ಯದ ಉದ್ದಗಲಕ್ಕೂ ಓಡಾಡಿ ತನಗೆ ದಕ್ಕಿದ ತಿಳುವಳಿಕೆಯನ್ನು ಕ್ರಾಂತಿಯ ಕಿಡಿಯಾಗಿ ಹೊತ್ತಿಸಿದವರು. ಪ್ರeಯೇ ನಾಶವಾಗಿದ್ದ ದಲಿತ ಸಮುದಾಯಗಳ ಕೇರಿಗಳಲ್ಲಿ ಬಂಡಾಯದ ಬೀರುಗಾಳಿ ಎಬ್ಬಿಸಿದವರು. ಊರಾಚೆಯ ಕೇರಿಗಳ ಸೋತ ರಟ್ಟೆಗಳಿಗೆ ಹೋರಾಟದ ಕಿಚ್ಚು ತುಂಬಿದವರು ಪ್ರೊ. ಬಿ. ಕೃಷ್ಣಪ್ಪ ಎಂದರು.

೧೯೭೪ರಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟುಹಾಕಿದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳುವಳಿಯನ್ನು, ದಲಿತ ಸಾಹಿತ್ಯ ಮತ್ತು ಚಿಂತನೆಯನ್ನು ಪ್ರಧಾನ ದಾರಿಗೆ ತಂದು ನಿಲ್ಲಿಸಿದವರು. ದಲಿತ ಚಳುವಳಿಯ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮದಿನಾಚರಣೆಯನ್ನು ಪ್ರತಿವರ್ಷವೂ ಆಚರಿಸಿಕೊಂಡು ಬರುತ್ತಿದ್ದು, ಜೂನ್ ೯ರಂದು ಹಮ್ಮಿಕೊಂಡಿರುವ ಸಮಾರಂಭವನ್ನು ಪ್ರಗತಿಪರ ಚಿಂತಕರಾದ ದಿನೇಶ್ ಅಮೀನ್‌ಮಟ್ಟು ಉದ್ಘಾಟಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್‌ಬಾನು, ಮಾಜಿ ಶಾಸಕ ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ, ದಲಿತ ನೌಕರರ ಒಕ್ಕೂಟದ ರಾಜಧ್ಯಕ್ಷ ಬಿ.ಎಲ್. ರಾಜು, ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಜಿಲ್ಲಾ ಸಂಚಾಲಕ ಎಂ. ಏಳುಕೋಟಿ ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಡಿಎಸ್‌ಎಸ್‌ನ ಪದಾಧಿಕಾರಿಗಳಾದ ಎಂ. ಏಳುಕೋಟಿ, ಶಿವಬಸಪ್ಪ ಭದ್ರಾವತಿ, ಹರಿಗೆ ರವಿ, ಹನುಮಂತಪ್ಪ ಎಡವಾಲ, ವೆಂಕಟೇಶ್, ಮನ್ಸೂರ್ ಲಕ್ಕವಳ್ಳಿ, ಚಂದ್ರಪ್ಪ ಜೋಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *