
ಶಿವಮೊಗ್ಗ :- ಸೂಡಾದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಗರದ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನಗಳು ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಸೂಡಾ ಅಧ್ಯಕ್ಷ ಸುಂದರೇಶ್ ಕರೆ ನೀಡಿದರು.

ನಗರಾಭಿವೃದ್ದಿ ಪಾಧಿಕಾರದಿಂದ ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಅಭಿವೃದ್ದಿ ಪಡಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ ಕೆಲವೆಡೆ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನ, ಸುತ್ತಮುತ್ತಲಿನ ಜಗವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಸಹಕರಿಸಬೇಕು. ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಬೇಸಿಗೆಯಲ್ಲಿ ತಂಪು ವಾತಾವರಣ ಸಾಧ್ಯವಾಗುತ್ತದೆ. ಹಾಗೂ ನಗರದ ಸೌಂದರ್ಯವೂ ಹೆಚ್ಚುತ್ತದೆ ಎಂದರು.

ಪಾರ್ಕು, ರಸ್ತೆಯಂತಹ ಸಾರ್ವಜನಿಕ ಆಸ್ತಿ, ನಿವಾಸಿಗಳದ್ದೇ ಆಗಿದ್ದು ಇದನ್ನು ಕಾಪಾಡಿಕೊಂಡು ಹೋಗಬೇಕೆಂದ ಅವರು ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪಮಾತನಾಡಿ, ನಿವಾಸಿಗಳು ತಮ್ಮ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ನಗರದ ಸೌಂದರ್ಯಕ್ಕೆ ಕೊಡುಗೆ ನೀಡಬೇಕೆಂದರು.
ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಕಾರ್ಯಪಾಲಕ ಅಭಿಯಂತರ ಗಂಗಾಧರ್ ಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ,ಇತರೆ ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.
