
ಶಿವಮೊಗ್ಗ :- ಮಲೆನಾಡು ಭಾಗದಲ್ಲಿ ಕಿಡ್ನಿ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಹೆಸರುವಾಸಿಯಾಗಿರುವ ಎನ್.ಯು. ಆಸ್ಪತ್ರೆ ಇನ್ನು ಮುಂದೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂಬ ಹೆಸರಿನಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎನ್.ಯು. ಆಸ್ಪತ್ರೆಯು ಕಳೆದ ಹಲವು ವರ್ಷಗಳಿಂದ ಶಿವಮೊಗ್ಗದಲ್ಲಿ ಆಸ್ಪತ್ರೆ ಸ್ಥಾಪಿಸಿ ಕಿಡ್ನಿಗೆ ಸಂಬಂಧಿಸಿದಂತೆ ಚಿಕಿತ್ಸೆ ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಎನ್.ಯು. ಆಸ್ಪತ್ರೆ ಎಂದರೆ ಸಾಮಾನ್ಯ ಜನರಿಗೆ ಅರ್ಥವಾಗುತ್ತಿರಲಿಲ್ಲ. ಎನ್.ಯು. ಆಸ್ಪತ್ರೆಯು ಮೂತ್ರ ಸಂಬಂಧಿತ ಕಾಯಿಲೆಗಳಿಗೆ ಮತ್ತು ಮೂತ್ರ ಪಿಂಡ ಕಸಿಗೆ ಹೆಸರುವಾಸಿಯಾಗಿದ್ದರೂ ಹೆಸರಿನಲ್ಲಿ ಹಿಂದೇಟು ಇತ್ತು. ಇದನ್ನು ಹೋಗಲಾಡಿಸಿ ಜನಸಾಮಾನ್ಯರಿಗೂ ಅರ್ಥವಾಗಬೇಕು ಎಂಬ ಹಿನ್ನಲೆಯಲ್ಲಿ ವಿಶ್ವ ಕಿಡ್ನಿ ದಿನವಾದ ಇಂದಿನಿಂದ ಈ ಆಸ್ಪತ್ರೆಗೆ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಎಂದು ಮರು ನಾಮಕರಣ ಮಾಡಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ಈಗಾಗಲೇ 18 ಜನರಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆ ನೀಡಲಾಗಿದೆ. ರಕ್ತದ ಗುಂಪು ಹೊಂದಾಣಿಕೆಯಾಗದವರಿಗೂ ಯಶಸ್ವಿ ಚಿಕಿತ್ಸೆ ಮಾಡಲಾಗಿದೆ. ಆಧುನಿಕ ಸೌಲಭ್ಯಗಳು ನಮ್ಮ ಆಸ್ಪತ್ರೆಯಲ್ಲಿ ಇವೆ. ದೂರದ ಊರುಗಳಿಗೆ ಹೋಗುವ ಅಗತ್ಯವಿಲ್ಲ. ಎಲ್ಲರಿಗೂ ಕೈಗೆಟುಕುವಂತೆ ಕಿಡ್ನಿ ಆರೋಗ್ಯದ ಕುರಿತಾಗಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಾ ತನ್ನಸ ಸೇವೆಯನ್ನು ಶಿವಮೊಗ್ಗ ಜಿಲ್ಲೆಯಲ್ಲದೇ ಸುತ್ತಮುತ್ತ ಜಿಲ್ಲೆಗಳಿಗೂ ವಿಸ್ತರಿಸಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ತಜ್ಞ ವೈದ್ಯರಾದ ಡಾ. ಪ್ರದೀಪ್ ಎಂ.ಜಿ., ಡಾ. ಕಾರ್ತಿಕ್ ಎಸ್.ಎಲ್., ಡಾ. ಆಕಾಶ್ ಜೆ.ಎಸ್. ಇದ್ದರು.
