
ಸಾಗರ :- ಖಾಸಗಿ ಆಸ್ಪತ್ರೆಯಾದರೆ ಸುಮ್ಮನೆ ಬರುತ್ತೀರಿ. ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ನಿಮ್ಮ ವರ್ತನೆಯೆ ಬದಲಾಗುತ್ತಿದೆ. ಇದು ಸರಿಯಲ್ಲ ವೈದ್ಯಸಿಬ್ಬಂದಿಯನ್ನು ಗೌರವದಿಂದ ನೋಡಿ. ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ವೈದ್ಯಸಿಬ್ಬಂದಿಯನ್ನು ಬೆದರಿಸುವುದು, ಸಾರ್ವಜನಿಕ ಸ್ವತ್ತುಗಳಿಗೆ ಹಾನಿ ಮಾಡಿದರೆ ಸಹಿಸಿಕೊಳ್ಳುವುದಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ತಾಯಿಮಗು ಆಸ್ಪತ್ರೆಯಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಿ, ರಾಷ್ಟ್ರೀಯ ಹೆಣ್ಣುಮಗು ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಆಸ್ಪತ್ರೆ ಬಡವರಿಗಾಗಿ ಇರುವುದು. ಇದು ಯಾರ ಆಸ್ತಿಯೂ ಅಲ್ಲ. ನಮ್ಮೆಲ್ಲರ ಆಸ್ತಿಯಾಗಿದ್ದು ಉಳಿಸಿಕೊಳ್ಳುವುದು ನಮ್ಮ ಕೈನಲ್ಲಿ ಇರುತ್ತದೆ. ವೈದ್ಯರ ಮೇಲೆ ದಬ್ಬಾಳಿಕೆ ಮಾಡಿದರೆ ಅವರಿಗೆ ನಿರ್ಭೀತಿಯಿಂದ ಕೆಲಸ ಮಾಡಲು ಆಗುವುದಿಲ್ಲ. ತಾಯಿಮಗು ಆಸ್ಪತ್ರೆಯಲ್ಲಿ ವರ್ಷಕ್ಕೆ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆ ಆಗುತ್ತಿದ್ದು, ಇದು ಜಿಲ್ಲೆಯಲ್ಲಿಯೆ ತಾಲ್ಲೂಕು ಆಸ್ಪತ್ರೆ ಮಾಡುತ್ತಿರುವ ದಾಖಲೆಯ ಕೆಲಸವಾಗಿದೆ ಎಂದು ಹೇಳಿದರು.
ಉಪವಿಭಾಗೀಯ ಆಸ್ಪತ್ರೆಗೆ ಆರೋಗ್ಯ ಸಚಿವರು ಭೇಟಿ ನೀಡಿ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದ್ದು, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ನಮ್ಮ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಶೌಚಾಲಯ, ಕ್ಯಾಂಟಿನ್, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವೈದ್ಯರ ಕೊರತೆ ನೀಗಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಭ್ರೂಣ ಹತ್ಯೆ ಬೇಡ : ಹೆಣ್ಣುಮಕ್ಕಳ ಜನ್ಮದಿನಾರಣೆ ಅಂಗವಾಗಿ ಜನಿಸಿದ ಮಗುವಿಗೆ ಶುಭಾಶಯ ಕೋರಿದ ಶಾಸಕರು, ಹೆಣ್ಣು ಮತ್ತು ಗಂಡು ಎನ್ನುವ ಬೇಧಭಾವ ಮಾಡಬೇಡಿ. ಪ್ರಸ್ತುತ ಮಹಿಳೆ ಎಲ್ಲಾ ಕಡೆ ಅದ್ವಿತೀಯ ಸಾಧನೆ ಮಾಡುತ್ತಿದ್ದಾಳೆ. ಭ್ರೂಣಹತ್ಯೆಯಂತಹ ಪಾಪದ ಕೆಲಸವನ್ನು ಕೈಬಿಡಬೇಕು. ಹೆಣ್ಣು ಮಗುವಿಗೆ ಸಾಮಾಜಿಕ ಮಾನ್ಯತೆ ಸಿಗಬೇಕು ಎಂದು ಅಭಿಪ್ರಾಯಿಸಿದರು.
ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಡಾ. ಪ್ರತಿಮಾ, ಡಾ. ಭರತ್, ಡಾ. ಬಿ.ಜಿ.ಸಂಗಮ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ ಇನ್ನಿತರರು ಹಾಜರಿದ್ದರು.