ಮೈಸೂರು :- ಹುಣಸೂರು ತಾಲೂಕಿನ ಬಿಳಿಕೆರೆ ಗೊಮ್ಮಟಗಿರಿಯಲ್ಲಿರುವ ಭಗವಾನ್ ಬಾಹುಬಲಿಗೆ ೭೫ನೇ ಮಹಾಮಸ್ತಕಾಭಿಷೇಕ (ಅಮೃತ ಮಹೋತ್ಸವ) ಅಂಗವಾಗಿ ಡಿ. 13ರಿಂದ 15ರ ವರೆಗೆ ವಿಶೇಷ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮೂರು ದಿನವೂ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಸಂಪನ್ನಗೊಳ್ಳಲಿದೆ. 13ರ ಬೆಳಗ್ಗೆ 10.30ಕ್ಕೆ ಶಿವಮೊಗ್ಗ ಜಿಲ್ಲೆ ಹೊಂಬುಜದ ಡಾ. ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಡಿ.ಸುಧಾಕರ್ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. 14ರ ಬೆಳಗ್ಗೆ 10ಕ್ಕೆ ಅಭಿಷೇಕ, ಮಧ್ಯಾಹ್ನ 2ಕ್ಕೆ ಅಮೃತ ಕುಟೀರವನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಡಿ. 15ರ ಬೆಳಗ್ಗೆ ಸಮಸ್ತ ಭಟ್ಟಾರಕರ ಸಾನ್ನಿಧ್ಯದಲ್ಲಿ ಬಾಹುಬಲಿಗೆ ಹಾಲು, ಮೊಸರು, ಎಳನೀರು, ಕಬ್ಬಿನ ಹಾಲು, ಶ್ರೀಗಂಧ, ಕಷಾಯ, ಅರಿಶಿಣ ದ್ರವ್ಯಗಳಿಂದ ಮಹಾಮಸ್ತಕಾಭಿಷೇಕ ಜರುಗಲಿದೆ.
4 ದಿನ ಜಾತ್ರಾ ಮಹೋತ್ಸವ, ನೃತ್ಯ ವರ್ಣ ತಂಡದಿಂದ ಭರತನಾಟ್ಯ ಪ್ರಸ್ತುತಿ

ನೃತ್ಯ ವರ್ಣ – ತಂಡದಿಂದ ಭರತನಾಟ್ಯ ಗೊಮ್ಮಟಗಿರಿ ಭಗವಾನ್ ಬಾಹುಬಲಿ 75ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಿಸಲಿದೆ. 13ರ ಸಂಜೆ ಮೈಸೂರಿನ ನೃತ್ಯ ವರ್ಣ ಕಲಾಸೌರಭ ತಂಡದವರು ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ.

ವಿದುಷಿ ಕಲ್ಪಿತಾ ನೇತೃತ್ವದ ತಂಡ ಈ ಸಂದರ್ಭ ಪುಷ್ಪಾಂಜಲಿ, ಗಣೇಶ ಸ್ತುತಿ, ವಿಠಲ ಕೃಷ್ಣ ಕುರಿತಾದ ದೇವರನಾಮ, ಬಾಹುಬಲಿ ಕುರಿತಾದ ನೃತ್ಯ ರೂಪಕ ಪಡಮೂಡಲಿದೆ. ಕಳೆದ 6 ವರ್ಷದಿಂದ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ‘ನೃತ್ಯ ವರ್ಣ’ ದಲ್ಲಿ ನೂರಾರು ಮಕ್ಕಳು ಶಾಸ್ತ್ರೀಯ ನೃತ್ಯ, ಸಂಗೀತ, ಚಿತ್ರಕಲೆಗಳನ್ನು ಅಭ್ಯಾಸ ಮಾಡುತ್ತಿರುವುದು ವಿಶೇಷ. ಚಿಣ್ಣರೊಂದಿಗೆ ಮಧ್ಯ ವಯಸ್ಸಿನವರೂ ನರ್ತನ ಹಾಗೂ ಇತರ ಕಲೆಗಳನ್ನು ಉಳಿಸಿ ಬೆಳೆಸುವ ಕಲಾ ಸೇವೆಯಲ್ಲಿ ತೊಡಗಿರುವುದು ಬಹು ವಿಶೇಷ.
ಕರುನಾಡಿನ ಪ್ರತಿಷ್ಠಿತ ಬನವಾಸಿಯ ಕದಂಬೋತ್ಸವ, ಕಾರವಾರದ ಕರಾವಳಿ ಉತ್ಸವ, ಮೈಸೂರ ದಸರಾ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ (ನೃತ್ಯ ಭಾರತೀ) ಇತ್ಯಾದಿ ಕಾರ್ಯಕ್ರಮಗಳಲ್ಲಿ ಈ ತಂಡದವರು ಮನಮೋಹಕ, ವಿಷಯಾಧಾರಿತ ನೃತ್ಯ ಕಾರ್ಯಕ್ರಮ ನೀಡಿರುವುದು ಗಮನೀಯ.
ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ವಿದುಷಿ ಕಲ್ಪಿತಾ ನೇತೃತ್ವದ ತಂಡದಲ್ಲಿ ನೃತ್ಯವರ್ಣದ ಶಿಷ್ಯವರ್ಗದವರು ನೃತ್ಯ ಪ್ರದರ್ಶನ ನೀಡಿ ಸಾವಿರಾರು ಪ್ರೇಕ್ಷಕರಿದಂದ ಸೈ ಎನ್ನಿಸಿಕೊಂಡಿರುವುದು ಕಲಾ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ.