ಶಿವಮೊಗ್ಗ :- ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಿಂದ ಐಇಇಇ ಬೆಂಗಳೂರು ಮತ್ತು ಮಂಗಳೂರು ವಿಭಾಗ, ಐಇಟಿಇ ಶಿವಮೊಗ್ಗ ಕೇಂದ್ರ, ಐಇಇಇ ಕಾಮ್ಸಾಕ್ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಮಲ್ಟಿ ಮಿಡಿಯಾ ಪ್ರೊಸೆಸಿಂಗ್, ಕಮ್ಯುನಿ ಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕುರಿತ ನಾಲ್ಕನೇ ಅಂತರ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಡಿ. 13 ಮತ್ತು 14 ರಂದು ಎರಡು ದಿನಗಳ ಕಾಲ ಕಾಲೇಜಿನ ಸರ್.ಎಂ.ವಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಡಿ. 13ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಐಐಎಸ್ಸಿ ಪ್ರಾಧ್ಯಾಪಕ ಟಿ. ಶ್ರೀನಿವಾಸ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಆಗಮಿಸಲಿದ್ದಾರೆ. ಅತಿಥಿಗಳಾಗಿ ಆಸ್ಟ್ರೇಲಿಯಾ ಡಿಕಿನ್ ವಿಶ್ವವಿದ್ಯಾಲಯದ ಡಾ. ಗ್ಯಾಂಗ್ ಲಿ, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ. ಸತ್ಯನಾರಾಯಣ ಉಪಸ್ಥಿತರಿರಲಿದ್ದಾರೆ.
ಡಿ. 14ರ ಶನಿವಾರ ಸಂಜೆ 4 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ತೇಜಸ್ ನೆಟ್ವರ್ಕ್ ಉಪಾಧ್ಯಕ್ಷ ಅನಿನ್ಧ್ಯ ಸಹ, ಇನ್ಫೋಸಿಸ್ ಕಂಪನಿ ಸಹ ಉಪಾಧ್ಯಕ್ಷೆ ಜನಪ್ರಿಯಾ, ಎನ್ಇಎಸ್ ಖಜಂಚಿ ಡಿ.ಜಿ. ರಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಮಾತನಾಡಿ, ಎರಡು ದಿನಗಳ ವಿಚಾರ ಸಂಕಿರಣದಲ್ಲಿ ವಿವಿಧ ಗೋಷ್ಟಿಗಳು ನಡೆಯಲಿದ್ದು, ರಾಷ್ಟ್ರ, ಅಂತರ ರಾಷ್ಟ್ರೀಯ ವಿವಿಗಳ ಉಪನ್ಯಾಸಕರು, ಸಂಶೋದಕರು, ತಜ್ಞರು ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ದೇಶದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸುವ ಸಂಶೋಧನಾರ್ಥಿಗಳಿಂದ ಆಯ್ದ 60 ನಾವೀನ್ಯ ಪ್ರಬಂಧಗಳನ್ನು ಮಂಡಿಸಲಾಗುತ್ತಿದ್ದು, ಮೂರು ವಿಶೇಷ ಪ್ರಬಂಧಕ್ಕೆ ಉತ್ತಮ ಪ್ರಬಂಧ ಪ್ರಶಸ್ತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ, ಕಾರ್ಯಕ್ರಮ ಸಂಯೋಜಕರಾದ ಡಾ.ಶೀಲಾ, ಡಾ.ಪ್ರಮೋದ್, ಲೆಕ್ಕಪತ್ರ ವಿಭಾಗ ಮುಖ್ಯಸ್ಥ ಗುರುರಾಜ್ ಎಂ. ಉಪಸ್ಥಿತರಿದ್ದರು.