google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಧಾರ್ಮಿಕ ವಿಧಿ- ವಿಧಾನಗಳಿಗೆ ಬಳಸಿದ ಅಕ್ಕಿ, ಕುಂಕುಮ, ಅರಿಶಿನ, ಹೂವು, ಬಟ್ಟೆ, ಬಾಳೆದೆಲೆ, ಸತ್ತವರ ಅಸ್ಥಿ, ಹೂವಿನ ಹಾರ ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ತುಂಗಾ ನದಿಗೆ ಹಾಕುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುತ್ತಿದೆ. ಕುಡಿಯಲು ಯೋಗ್ಯವಲ್ಲ ಎಂದು ಪ್ರಮಾಣಪತ್ರ ಪಡೆದಿರುವಂತಹ ಗಂಭೀರ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಾಗರೀಕರು ತುಂಗಾ ನದಿಗೆ ತ್ಯಾಜ್ಯ ಎಸೆಯಬಾರದು ಎಂದು ಪರೋಪಕಾರಂನ ಕಟ್ಟಾಳು ಶ್ರೀಧರ್ ಎನ್.ಎಂ. ಮನವಿ ಮಾಡಿದರು.

ಪರೋಪಕಾರಂನಿಂದ ಇಂದು ನಗರದ ತುಂಗಾ ನದಿಯ ಹಳೇ ಸೇತುವೆ ಸ್ವಚ್ಛತೆಯ ಮುಂದುವರಿಕೆ ಹಾಗೂ ಜನ ಜಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತುಂಗೆಯ ಒಡಲಿಗೆ ಕೊಳಚೆ ನೀರು ಸೇರುತ್ತಿರುವುದು ಒಂದೆಡೆಯಾದರೆ, ನದಿ ಪಾತ್ರದಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ಸುರಿಯಲಾಗುತ್ತಿದೆ. ಪರಿಣಾಮ, ಕಸದ ರಾಶಿಯೇ ಶೇಖರಣೆಯಾಗಿದೆ. ನದಿ ಮತ್ತು ಯಾವುದೇ ಜಲ ಮೂಲಗಳನ್ನು ಕಲುಷಿತಗೊಳಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಆದರೂ ನಾಗರೀಕರು ಇದರ ಅರಿವೆಲ್ಲವೇನೋ ಎಂಬಂತೆ ನದಿ ನೀರನ್ನು ಕಲುಷಿತ ಗೊಳಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಭವಿಷ್ಯದ ದಿನಗಳಲ್ಲಿ ಸಂಕಷ್ಟ ನಿಶ್ಚಿತ ಎಂದು ಎಚ್ಚರಿಸಿದರು.

ಸೇತುವೆ ಮೇಲೆ ಹೋಗುವ ಸಾರ್ವಜನಿಕರು ಹಾಗೂ ಬಸ್‌ನಲ್ಲಿ ತೆರಳುವ ಜನರು ಕಸದ ರಾಶಿಯನ್ನು ನದಿಗೆ ಹಾಕುತ್ತಿದ್ದಾರೆ. ಇದನ್ನು ಇಡೆ ಗಟ್ಟಲು ಹೊಸ ಸೇತುವೆ ಇಕ್ಕೆಲಗಳಲ್ಲಿ ಆಳೆತ್ತರದ ಗ್ಯಾಲರಿ ನಿರ್ಮಿಸಲಾಗಿದ್ದರೂ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಹಳೇ ಸೇತುವೆ ಮೇಲೆ ಇಂತಹ ಗ್ಯಾಲರಿ ಇಲ್ಲದೆ ಇರುವುದರಿಂದ ಮನಬಂದಂತೆ ತ್ಯಾಜ್ಯ ಎಸೆಯಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತುಂಗಾ ನದಿಯ ಹಳೆಯ ಸೇತುವೆ, ಅದು ಬರೀ ಸೇತುವೆ ಅಲ್ಲ, ಶತಮಾನ ಗಳ ಕಾಲ ಶಿವಮೊಗ್ಗ ನಗರವನ್ನು ಬೇರೆ ನಗರಗಳ ಮಧ್ಯೆ ಬೆಸೆಯುತ್ತಿದ್ದದ್ದು ಅಷ್ಟೇ ಅಲ್ಲದೇ, ನಮ್ಮ ಹಿಂದಿನ ಪೀಳಿಗೆಯ ನೆನಪುಗಳನ್ನು ಸಹ ನಮಗೆ ಸ್ಮರಿಸಲು ಇರುವ ಕೊಂಡಿಯಾಗಿದೆ. ಈಗಲೂ ದೃಢವಾಗಿ ನಿಂತ ಈ ಸೇತುವೆ ನಮ್ಮ ಹಿರಿಯರ ಅದ್ಭುತ ಇಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಈ ಸೇತುವೆ ಮೇಲೆ ಬೆಳೆದ ಕಳೆ ಹಾಗೂ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಿ ಸೇತುವೆ ಮೇಲೆ ಇರುವ ನಮ್ಮ ಪ್ರೀತಿ ಬಾಂಧವ್ಯ ವನ್ನು ಪ್ರದರ್ಶಿಸೋಣವೆಂದರು.

ಪರೋಪಕಾರಂನ ಅನಿಲ್ ಹೆಗ್ಗಡೆ, ಕಾರ್ಪೆಂಟರ್ ಕುಮಾರ್, ರಾಘವೇಂದ್ರ ಮಹೇಂದ್ರಕರ್, ಗಾಡಿಕೊಪ್ಪ ಕುಮಾರಣ್ಣ, ವಚನ ಜಗದೀಶ್, ಓಂ ಪ್ರಕಾಶ್, ನಂದಿ ಗ್ಲಾಸ್‌ನ ದೇವೇಂದ್ರಪ್ಪ, ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಶಿವಮೂರ್ತಿ, ವಿದ್ಯಾರ್ಥಿಗಳಾದ ವಿಜಯ ಕಾರ್ತಿಕ್, ವೈಷ್ಣಿಕ, ವೈಶಾಖ, ಚರಿತಾ (ಚರ್ರಿ), ಮಂಜುನಾಥ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *