
ಶಿವಮೊಗ್ಗ :- ಆಯೋಧ್ಯೆ ಮತ್ತು ಕಾಶಿ ಯಾತ್ರೆಯು ನಮ್ಮ ಜನ್ಮವನ್ನು ಸಾರ್ಥಕಗೊಳಿಸಿದೆ ಎಂದು ಮಾಜಿ ಜಿ.ಪಂ. ಸದಸ್ಯ ಕೆ.ಈ. ಕಾಂತೇಶ್ ಹೇಳಿದರು
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ.೨೩ರಂದು ಸುಮಾರು ೧,೬೦೦ ಯಾತ್ರಾರ್ಥಿಗಳನ್ನು ನಾವು ವಿಶೇಷವಾದ ರೈಲಿನಲ್ಲಿ ಆಯೋಧ್ಯೆ ಮತ್ತು ಕಾಶಿಗೆ ಯಾತ್ರೆ ಕರೆದುಕೊಂಡು ಹೋಗಿದ್ದೆವು. ಈ ಯಾತ್ರೆಯೂ ಅತ್ಯಂತ ಯಶಸ್ವಿಯಾಗಿ ಮನಸ್ಸನ್ನು ಹರ್ಷಗೊಳಿಸಿದೆ. ಯಾವ ಚಿಕ್ಕ ಲೋಪದೋಷವು ಇಲ್ಲದಂತೆ ನಡೆದಿದೆ. ಒಂದು ರೀತಿಯ ಸಾರ್ಥಕ ಮನೋಭಾವ ನಮಗೆ ಬಂದಿದೆ. ಯಾತ್ರಾರ್ಥಿಗಳು ಕೂಡ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಹೇಳಿದ್ದು, ನಮಗೆ ಸಂತೋಷ ತಂದಿದೆ ಎಂದರು.
ಆಯೋಧ್ಯೆಯಲ್ಲಿ ಗುರುಗೋಪಾಲಜಿ ಅವರ ಪೂರ್ಣ ಸಹಕಾರ ಇತ್ತು. ಮತ್ತು ಕಾಶಿಯ ಜಗದ್ಗುರುಗಳು ದೆಹಲಿಯಲ್ಲಿದ್ದರು ಕೂಡ ಬಂದು ನಮ್ಮನ್ನು ಹರಸಿದರು. ಇದು ಕೂಡ ನಮಗೆ ಸಂತೋಷವಾಯಿತು. ಒಟ್ಟಾರೆ ಈ ಯಾತ್ರೆ ಬಹುಜನ್ಮದ ಪುಣ್ಯ ಎಂದು ಮನದಟ್ಟಾಯಿತು ಎಂದರು.
ಯಾತ್ರೆಯ ಸಮಯದಲ್ಲಿ ಶಿವಮೊಗ್ಗದ ಸಾಕಷ್ಟು ಸಾರ್ವಜನಿಕರು ನಾವು ಬರುತ್ತಿದ್ದೆವು ಎಂದು ಪೋನ್ ಮಾಡುತ್ತಿದ್ದರು. ನಮಗೆ ಪ್ರಸಾದ ತನ್ನಿ ಎಂದು ಹೇಳಿದರು. ಇದನ್ನು ಮನದಲ್ಲಿಟ್ಟುಕೊಂಡು ನಾವು ಆಯೋಧ್ಯೆ ಮತ್ತು ಕಾಶಿಯಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಪ್ರಸಾದವನ್ನು ತಂದಿದ್ದೇವೆ. ಅಲ್ಲದೆ ವಿಶೇಷವಾಗಿ ಬೆಳ್ಳಿಕೋಟ್ ಇರುವ ಕಾಯಿನ್ನ್ನು ಕೂಡ ತಂದಿದ್ದೇವೆ. ಈ ಕಾಯಿನ್ನಲ್ಲಿ ಒಂದು ಭಾಗದಲ್ಲಿ ಆಯೋಧ್ಯೆಯ ಶ್ರೀರಾಮ, ಮತ್ತೊಂದು ಭಾಗದಲ್ಲಿ ಕಾಶಿಯ ವಿಶ್ವನಾಥನ ಭಾವಚಿತ್ರವಿದೆ. ಒಂದು ಲಕ್ಷ ಕಾಯಿನ್ ತಂದಿದ್ದು, ಇದನ್ನು ಶಿವಮೊಗ್ಗದ ಪ್ರತಿಯೊಂದು ಮನೆಗೂ ಹಂಚಲಾಗುವುದು ಎಂದರು.
ಮನೆಮನೆಗೆ ಪ್ರಸಾದ ಮತ್ತು ನಾಣ್ಯವನ್ನು ಹಂಚುವ ಕಾರ್ಯಕ್ರಮಕ್ಕೆ ಡಿ.೨ರಂದು ಶುಭಮಂಗಳ ಸಮುದಾಯ ಭವನದಲ್ಲಿ ಸಂಜೆ ೬ಕ್ಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಈಗಾಗಲೇ ಯಾತ್ರೆಯನ್ನು ಪೂರೈಸಿ ಬಂದಿರುವ ೧೬೦೦ ಜನರಿಗೂ ಪ್ರಸಾದ ಮತ್ತು ನಾಣ್ಯವನ್ನು ಕೊಡಲಾಗುವುದು. ನಂತರ ಮಾರನೆಯ ದಿನ ಶಿವಮೊಗ್ಗದ ಪ್ರತಿ ಮನೆಗೂ ಪ್ರಸಾದ ನಾಣ್ಯ ತಲುಪಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಕುಬೇಂದ್ರಪ್ಪ, ವಾಗೀಶ್, ಚಿದಾನಂದ ಇದ್ದರು.