google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ವಿದ್ಯಾರ್ಥಿಗಳು ಜೀವನದಲ್ಲಿ ವಿದ್ಯೆ ಜೊತೆಗೆ ಸಂಸ್ಕಾರವನ್ನು ಕಲಿತು ಈ ದೇಶಕ್ಕೆ ಹಾಗೂ ಸಮಾಜಕ್ಕೆ ಶಕ್ತಿಯಾಗಬೇಕು ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಜಿ. ಭಿಮೇಶ್ವರ ಜೋಶಿ ಕರೆ ನೀಡಿದರು.

ಅವರು ಇಂದು ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಗುರುಕುಲ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆ ಹಾಗೂ ಜನ್ಮದಾತರಿಗೆ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಜನ ಹಾಗೂ ಭಾಗ್ಯದ ಕ್ಷಣವನ್ನು ಬಳಸಿಕೊಂಡು ದೇಶಕ್ಕೆ ಒಂದು ದೊಡ್ಡ ಶಕ್ತಿಯಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ನಮಗೆ ಸರಿಯಾದ ಗುರಿಯಿಲ್ಲ, ಗುರು ಇಲ್ಲ ಎಂಬಂತಹ ಪರಿಸ್ಥಿತಿ ಕೆಲವೆಡೆ ನಿರ್ಮಾಣವಾಗಿದೆ ಅದು ನಮ್ಮ ದುರಂತ. ನಾವು ಸರಿಯಾದ ಗುರಿ ಹಾಗೂ ಗುರುವನ್ನು ಹೊಂದಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ರಾಮಕೃಷ್ಣ ಗುರುಕುಲದ ದ್ಯೇಯ ಶ್ಲಾಘನೀಯವಾದುದು ನಿಜಕ್ಕೂ ಸ್ವಾಗತಾರ್ಹ ಎಂದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು ಪ್ರಸಕ್ತ ಸಾಲಿನಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆ ನಡೆಸಲು ಉದ್ದೇಶಿಸಿರುವ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ನಾಮಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.

ಸಂಸ್ಥೆ ವ್ಯವಸ್ಥಾಪಕರಾದ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಅವರು ಮಾತನಾಡಿ, ಕೇವಲ ಎರಡೇ ಎರಡು ಮಕ್ಕಳಿಂದ ಆರಂಭಗೊಂಡ ವಿದ್ಯಾಸಂಸ್ಥೆ ಈಗ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಬೆಳೆಸುತ್ತಿದೆ. ಇದಕ್ಕೆ ಸಂಸ್ಥಾಪಕರಾದ ಡಿ.ಎಂ. ವೆಂಕಟರಮಣ ಅವರ ಕೊಡುಗೆ ಅಪಾರವಾದದ್ದು. ಅವರ ಹೆಜ್ಜೆಯ ಹಾದಿಯಲ್ಲಿ ಇಂದು ಸಂಸ್ಥೆ ಪಿಯು ಕಾಲೇಜನ್ನು ಸಹ ಆರಂಭಿಸಲು ಮುಂದಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಜನ್ಮದಾತರ, ಪೋಷಕರ ಪಾದಪೂಜೆಯನ್ನು ಧಾರ್ಮಿಕ ವಿಧಿವಿಧಾನದೊಂದಿಗೆ ನೆರವೇರಿ ಹಳೆಯ ವಿದ್ಯಾರ್ಥಿ ಆಕಾಶ್ ಮತ್ತು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಟ್ರಸ್ಟ್‌ನ ಸದಸ್ಯ ಡಿ.ಎಂ. ದೇವರಾಜ್ ಮಾತಡಿದರು. ಮುಖ್ಯೋಪಾಧ್ಯಾಯ ತೀರ್ಥೇಶ್, ಯಶಸ್ಸಿ ಹಾಗೂ ಎ. ವೆಂಕಟೇಶ್ ಪರಿಚಯಿಸಿದರು. ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾಶ್ರಮ ಕೃಷ್ಣ ಟ್ರಸ್ಟ್‌ನ ಅಧ್ಯಕ್ಷ ಡಾ. ಬಿ.ಆರ್. ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಕೋ ಆರ್ಡಿನೇಟರ್‌ಗಳಾದ ಶರತ್ ಕುಮಾರ್ ಕೆ.ಡಿ. ಹಾಗೂ ಕೆ.ಎಸ್. ಅರುಣ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *