ಶಿವಮೊಗ್ಗ :- ಶ್ರೀ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ. 3, 4 ಮತ್ತು 5ರಲ್ಲಿ ಪರಮ ತಪಸ್ವಿ ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 114ನೇ ಪುಣ್ಯಸ್ಮರಣೋತ್ಸವ, 556ನೇ ಶಿವಾನುಭವಗೋಷ್ಠಿ, ಪ್ರಶಸ್ತಿ ಪ್ರಧಾನ ಸಮಾರಂಭ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಅವರು ಇಂದು ಬೆಕ್ಕಿನ ಕಲ್ಮಠದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, 2007ರಿಂದ ಪ್ರತಿ ವರ್ಷ ಸಮ್ಮೇಳನದಲ್ಲಿ ನೀಡಲಾಗುವ ಗುರುಬಸವಶ್ರೀ ಪ್ರಶಸ್ತಿಯನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ 2017ರಿಂದ ಪ್ರತೀ ವರ್ಷ ನೀಡಲಾಗುತ್ತಿರುವ ಅಕ್ಕಮಹಾದೇವಿ ಪ್ರಶಸ್ತಿಯನ್ನು ಕಲಬುರ್ಗಿಯ ಸಾಹಿತಿ ಡಾ.ಜಯಶ್ರೀ ದಂಡೆ ಇವರಿಗೆ ನೀಡಲಾಗುತ್ತಿದೆ ಎಂದರು.
ಜ. 3ರ ಬೆಳಿಗ್ಗೆ 10ಗಂಟೆಗೆ ಡಾ.ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆಯ ಮುರುಘಾಮಠ ಹಾಗೂ ವಾಸನ್ ಐ ಕೇರ್ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ವಚನ ಗಾಯನ ಸ್ಪರ್ಧೆಗಳು ನಡೆಯಲಿದ್ದು, ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ 114 ಮಹಿಳೆಯರಿಂದ ವಚನ ಗಾಯನವಿದೆ ಎಂದರು.
ಸಂಜೆ ೫ಗಂಟೆಗೆ 556ನೇ ಶಿವಾನುಭವ ಗೋಷ್ಠಿ, ಗುರುಬಸವಶ್ರೀ ಹಾಗೂ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕನಕಪುರ ದೇಗುಲಮಠದ ಶ್ರೀ ಚನ್ನಬಸವೇಶ್ವರ ಮಹಾಸ್ವಾಮೀಜಿ ಸಮಾರಂಭ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಡಾ.ಜಯಶ್ರೀ ದಂಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಜ.4ರ ಬೆಳಿಗ್ಗೆ 10 ಗಂಟೆಗೆ ನಡೆಯುವ ರಂಗೋಲಿ ಹಾಗೂ ಜನಪದ ಗೀತೆಗಳ ಸ್ಪರ್ಧೆಯನ್ನು ಹಾನಗಲ್ನ ವಿರಕ್ತಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ತಾಳಗುಪ್ಪದ ಶ್ರೀ ಕೂಡಲಿ ಮಠದ ಶ್ರೀ ಸಿದ್ಧವೀರಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಜೆ ೫ಗಂಟೆಗೆ ನಡೆಯುವ ಶರಣ ಸಾಹಿತ್ಯ ಸಮ್ಮೇಳನ ಮತ್ತು ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುಸ್ತಕ ಬಿಡುಗಡೆ ಮಾಡುವರು ಎಂದರು.
ಜ.5ರ ಬೆಳಿಗ್ಗೆ 7ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಪೂಜ್ಯ ಜಗದ್ಗುರುಗಳಾದ ಶೂನ್ಯ ಪೀಠಾರೋಹಣ ನಡೆಯಲಿದ್ದು, ಹುಣಸೇಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ವಿವಿಧ ಮಠಗಳ ಶ್ರೀಗಳ ಸಮ್ಮುಖದಲ್ಲಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ನವಲಗುಂದದ ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ವಹಿಸಲಿದ್ದಾರೆ. ಸಂಜೆ 4.30ರಿಂದ ನಡೆಯುವ ಶ್ರೀಗಳ 114ನೇ ಪುಣ್ಯಸ್ಮರಣೆ ಹಾಗೂ ಭಾವೈಕ್ಯ ಸಮ್ಮೇಳನವನ್ನು ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿಗಳ ಸಮ್ಮುಖದಲ್ಲಿ ಸಚಿವ ಹೆಚ್.ಕೆ. ಪಾಟೀಲ್ ಉದ್ಘಾಟಿಸಲಿದ್ದಾರೆ. ಗಣ್ಯರು ಉಪಸ್ಥಿತರಿರುವರು ಎಂದರು.
ಸಮಿತಿಯ ಅಧ್ಯಕ್ಷ ಕೆ.ಎನ್. ತಾರಾನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಎನ್. ಮಹಾಲಿಂಗಯ್ಯ ಶಾಸ್ತ್ರಿ, ಖಜಾಂಚಿ ಹರ್ಷ ರುದ್ರೇಗೌಡ್ರು, ಪ್ರಮುಖರಾದ ಹೆಚ್.ಸಿ. ಯೋಗೀಶ್, ಎಸ್.ಎಸ್. ಜ್ಯೋತಿಪ್ರಕಾಶ್, ಶಾಂತಾ ಆನಂದ್, ಚಂದ್ರಶೇಖರಯ್ಯ, ಅನಿತಾ ರವಿಶಂಕರ್, ವಿವಿಧ ಸಮಿತಿಯ ಅಧ್ಯಕ್ಷರಾದ ಪುಷ್ಪ ಹಾಲಪ್ಪ, ವಿ.ಟಿ.ಅರುಣ್, ನಾಗರತ್ನ ಚಂದ್ರಶೇಖರ್, ಟಿ.ಎಸ್.ಸಿದ್ದೇಶ್, ಬಿ.ಶಿವರಾಜ್, ಸಂಚಾಲಕ ಡಾ.ವಿದ್ವಾನ್ ರೇಣುಕಾರಾಧ್ಯ, ಕಿರಣ್ ದೇಸಾಯಿ ಉಪಸ್ಥಿತರಿದ್ದರು.
