google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಹಾನಗರ ಪಾಲಿಕೆ ವ್ಯಾಪ್ತಿಯ ಹೋಟೆಲ್, ತಿಂಡಿಗಾಡಿಗಳಲ್ಲಿ ರಾಸಾಯನಿಕ ಬಣ್ಣಗಳು ಮತ್ತು ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಪಾಲಿಕೆ ಅಧಿಕಾರಿಗಳು ಮನವಾಗಿರುವುದನ್ನು ಖಂಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಕಾರ್ಯಕರ್ತರು ಇಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಆಹಾರ ಸುರಕ್ಷತಾ ಕಾಯ್ದೆಯಂತೆ ಹೋಟೆಲ್, ತಿಂಡಿ ಅಂಗಡಿಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕ ಬಣ್ಣಗಳನ್ನು ಮತ್ತು ಟೇಸ್ಟಿಂಗ್ ಪೌಡರ್ (ಅಜಿನಮೋಟೋ) ಬಳಸುವಂತಿಲ್ಲ. ಇವುಗಳನ್ನು ಬಳಕೆ ಮಾಡಿದ ಆಹಾರವನ್ನು ತಿನ್ನುವುದರಿಂದ ಕ್ಯಾನ್ಸರ್‌ನಂತಹ ಮಾರಕರೋಗಗಳು ಬರುತ್ತವೆ ಎನ್ನುವ ಕಾರಣದಿಂದ ಸರ್ಕಾರ ಇವುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿದೆ. ಆದರೆ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಹೋಟೆಲ್‌ಗಳು, ತಿಂಡಿಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಅನ್ನು ವ್ಯಾಪಕ ಬಳಕೆ ಮಾಡುತ್ತಿದ್ದು, ಇದನ್ನು ತಡೆಯಬೇಕಿರುವ ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಸುಮ್ಮನಿರುವುದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಾನ್‌ವೆಜ್ ಹೋಟೆಲ್‌ಗಳು, ಚಾಟ್ಸ್ ಅಂಗಡಿಗಳು ತಲೆಯೆತ್ತಿವೆ. ಫುಟ್‌ಪಾತ್‌ಗಳಲ್ಲಿಯೂ ಚಿಕ್ಕ ಚಿಕ್ಕ ಗಾಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳಿಗೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ತಿನಿಸುಗಳಿಗೆ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಆದರೆ, ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಶಿವಮೊಗ್ಗದ ಫುಡ್‌ಕೋರ್ಟ್ ಸೇರಿದಂತೆ ಬಹುತೇಕ ತಿಂಡಿ-ತಿನಿಸು ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಕೆ ಮಾಡಿದ ಪದಾರ್ಥಗಳನ್ನು ತಿನ್ನುತ್ತಿರುವ ಸಾರ್ವಜನಿಕರ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ಕೂಡಲೇ ಪಾಲಿಕೆ ಆಯುಕ್ತರು ಎಲ್ಲಾ ಹೋಟೆಲ್, ತಿನಿಸು ಅಂಗಡಿಗಳಲ್ಲಿ ಟೇಸ್ಟಿಂಗ್ ಪೌಡರ್ ಬಳಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಟೇಸ್ಟಿಂಗ್ ಪೌಡರ್ ಬಳಕೆ ಮಾಡುತ್ತಿರುವವರ ವಿರುದ್ಧ ದಂಡ ವಿಧಿಸಬೇಕು. ಈ ಬಗ್ಗೆ ನಿಗಾ ವಹಿಸಬೇಕಿದ್ದ ಪಾಲಿಕೆ ಆರೋಗ್ಯಾಧಿಕಾರಿಗಳು ಕರ್ತವ್ಯಲೋಪ ಎಸಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ನಗರಾಧ್ಯಕ್ಷರಾದ ರವಿಕುಮಾರ್ ನಗರ ಉಪಾಧ್ಯಕ್ಷರಾದ ಆದಿತ್ಯ, ಸುಭಾನ್ ಮತ್ತು ಪದಾಧಿಕಾರಿಗಳಾದ ವರುಣ್ ಪಂಡಿತ್, ಶ್ರೀಕಾಂತ್, ವಿಕ್ರಂ, ಅಭಿಷೇಕ್, ವಿಕಾಸ್, ಪ್ರಮೋದ್, ಥೌಪಿಕ್, ಹಾಲಸ್ವಾಮಿ, ಸೃಜನ್, ಕೌಶಿಕ್, ಯೂಸೋಫ್, ರಿಹಾನ್, ಕಿಶನ್, ರಾಯನ್, ಪ್ರಜ್ವಲ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *