ಶಿವಮೊಗ್ಗ :- ಜ್ಯೋತಿ ನಗರದಲ್ಲಿರುವ ಪಾರ್ಕ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ತಾರಕಕ್ಕೇರಿದ್ದು ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು, ಶಾಸಕರಾದ ಎಸ್.ಎನ್. ಚನ್ನಬಸಪ್ಪನವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ಹಿಂದೆ ಈ ಪಾರ್ಕ್ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ ಮಂಜೂರಾಗಿ ಪಾರ್ಕ್ ಅಭಿವೃದ್ಧಿಯಾಗಿತ್ತು. ಕೆಲವು ದಿನಗಳ ಹಿಂದೆ ಪಾರ್ಕ್ ಖಾಸಗಿ ಆಸ್ತಿ ಎಂದು ಸಂಪೂರ್ಣ ದಾಖಲೆ ಇರುವುದಾಗಿ ಮಾಲೀಕರ ಕಡೆಯವರು ಆಗಮಿಸಿ ಪಾಲಿಕೆಯಿಂದ ಅಭಿವೃದ್ಧಿಯಾದ ಎಲ್ಲಾ ಕಾಮಗಾರಿಗಳನ್ನು ತೆರವುಗೊಳಿಸಿದ್ದರು.
ಇದು ವಿವಾದಕ್ಕೆ ಕಾರಣವಾಗಿತ್ತು. ಆ ಜಗದಲ್ಲಿ ತನ್ನ ಆಸ್ತಿ ಎಂದು ನಿರ್ಮಾಣ ಕಾರ್ಯಕ್ಕೆ ತೊಡಗಿದ್ದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿನೀಡಿದ್ದು, ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.
ಪಾಲಿಕೆ ಅಧಿಕಾರಿಗಳು ಮತ್ತು ಶಾಸಕರು ಹಾಗೂ ಆಸ್ತಿಯ ಮಾಲೀಕರ ನಡುವೆ ವಿವಾದ ತಾರಕಕ್ಕೇರಿದ್ದು ಇನ್ನಷ್ಟೇ ತನಿಖೆಯ ಬಳಿಕೆ ನಿಜವಾದ ಮಾಲೀಕರು ಯಾರು ಎಂಬುದು ಗೊತ್ತಾಗಬೇಕಾಗಿದೆ. ಈ ಬಗ್ಗೆ ಜ್ಯೋತಿನಗರ ನಿವಾಸಿಗಳ ಸಂಘ ಇದು ಪಾಲಿಕೆಯ ಆಸ್ತಿ ಎಂದು ಆ ಆಸ್ತಿಯನ್ನು ಉಳಿಸಿಕೊಳ್ಳುವಂತೆ ಆಯುಕ್ತರಿಗೆ ಮನವಿ ನೀಡಿತ್ತು. ಪಾಲಿಕೆ ಕೂಡ ಈ ಪಾರ್ಕಿಗೆ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಖಾಸಗಿ ಆಸ್ತಿ ಆಗಿದ್ದಲ್ಲಿ ಅಭಿವೃದ್ಧಿಗೆ ಅನುದಾನ ಬಿಡಗಡೆ ಮಾಡಲು ಸಾಧ್ಯವೇ ಎಂಬುದು ನಿವಾಸಿಗಳ ಸಂಘದ ಪ್ರಶ್ನೆಯಾಗಿದೆ. ಆದರೆ ಆಸ್ತಿ ಮಾಲೀಕರು ನನ್ನ ಸಂಪೂರ್ಣ ದಾಖಲೆಗಳಿದ್ದು, ಶಾಸಕರು ಮತ್ತು ಪಾಲಿಕೆಯ ಅಧಿಕಾರಿಗಳು ವಿನಾಕಾರಣ ದಾಖಲೆ ಇಲ್ಲದೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನಿಖೆಯ ಬಳಿಕವಷ್ಟೇ ಸತ್ಯಾ ಸತ್ಯತೆ ತಿಳಿಯಬೇಕಾಗಿದೆ.