
ಶಿವಮೊಗ್ಗ :- ನಾಡ ಹಬ್ಬ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ-ಸಡಗರ ಎಲ್ಲರೂ ಕಂಡು ಬಂದಿದ್ದು, ಪೂಜೆಗೆ ಅಗತ್ಯವಾದ ಹೂವು-ಹಣ್ಣು, ಬೂದ ಗುಂಬಳ ಖರೀದಿ ಜೋರಾಗಿದೆ.
ನಾಳೆ ಆಯುಧ ಪೂಜೆ ಹಾಗೂ ನಾಡಿದ್ದು ವಿಜಯದಶಮಿ ಹಬ್ಬದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ಕಂಡು ಬಂದಿದೆ. ಮಾರುಕಟ್ಟೆಯಲ್ಲೂ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ. ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆ ಆಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರಗಳು ಹೆಚ್ಚಾಗಿವೆ. ೨ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗಿದೆ.

ದಸರಾ ಹಬ್ಬದಲ್ಲಿ ಚಂಡು ಹೂ, ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆಯುಧ ಪೂಜೆ ದಿನ ವಾಹನ, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುವುದರಿಂದ ಹೂವಿನ ಬೇಡಿಕೆಯು ಹೆಚ್ಚಾಗಿದೆ.
ನಗರದ ಗಾಂಧಿ ಬಜರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಹೆಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು. ಪರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ಊರಿಗೆ ಹಿಂತಿರುಗುತ್ತಿರುವುದರಿಂದ ಬಸ್ಸು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತು. ಆಯುಧಪೂಜೆ ಅಂಗವಾಗಿ ನಗರದ ಗ್ಯಾರೇಜ್, ವರ್ಕ್ಶಾಪ್ ಸೇರಿದಂತೆ ವಿವಿಧೆಡೆ ಸ್ವಚ್ಛತೆ ಮಾಡಿಕೊಂಡು ಪೂಜೆ ಸಿದ್ಧತೆ ನಡೆಸಲಾಗಿದೆ. ಇನ್ನು ವಾಹನಗಳನ್ನು ಕೂಡ ತೊಳೆದು ನಾಳಿನ ಪೂಜೆ ಜನ ತಯಾರಾಗುತ್ತಿದ್ದಾರೆ. ಕೆಲವೆಡೆ ಅಂಗಡಿಗಳ ಪೂಜೆಗೆ ಸಿದ್ಧತೆ ನಡೆದಿದೆ.