
ಶಿವಮೊಗ್ಗ :- ಪುರದಾಳು ಸುತ್ತಮುತ್ತ ಕಾಡಾನೆಗಳ ಉಪಟಳದಿಂದ ಹಾನಿಗೊಳಗಾದ ಭತ್ತದ ಸಸಿ, ಅಡಿಕೆ ಸಸಿ, ಬಾಳೆ, ಕಬ್ಬು ಹಾಗೂ ಮೆಕ್ಕೆಜೋಳವನ್ನು ತಂದು ಶಿವಮೊಗ್ಗ ವನ್ಯಜೀವಿ ವಲಯದ ಉಪಸಂರಕ್ಷಣಾಧಿಕಾರಿ ಕಛೇರಿ ಎದುರು ಸುರಿದು ಪುರದಾಳು ಗ್ರಾಮದ ರೈತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಪುರದಾಳು ಗ್ರಾಮದಲ್ಲಿ ಕಳೆದ ಹಲವು ತಿಂಗಳಿನಿಂದ ಕಾಡಾನೆಗಳ ಹಿಂಡು ರೈತರ ಹೊಲ, ಗದ್ದೆಗಳ ಮೇಲೆ ದಾಳಿನಡೆಸಿ ನಾಟಿ ಮಾಡಿದ್ದ ಭತ್ತದ ಗದ್ದೆ, ಅಡಿಕೆ ಸಸಿ, ಫಸಲಿಗೆ ಬಂದಿದ್ದ ಬಾಳೆ ಹಾಗೂ ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳಿಂದ ಊರಿನ ಒಳಗೂ ಕಾಡಾನೆಗಳು ಪ್ರವೇಶ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪುರದಾಳು ಗ್ರಾಮದ ಮೇಲಿನ ಪುರದಾಳ, ಬೇಳೂರು, ಕೌಲಾಪುರ ಸೇರಿದಂತೆ ಹಲವು ಕಡೆ ಕಾಡಾನೆಗಳು ದಿನನಿತ್ಯ ರೈತರ ಹೊಲಗಳಿಗೆ ದಾಳಿ ನಡೆಸುತ್ತಿವೆ. ಫಸಲಿಗೆ ಬಂದ ಬೆಳೆಯನ್ನು ಕಾಡಾನೆಗಳು ಹಾನಿ ಮಾಡುತ್ತಿರುವುದರಿಂದ ರೈತರು ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಅನುಭವಿಸುಂತಾಗಿದೆ. ಅಲ್ಲದೇ ಕಳೆದ ಕೆಲವು ತಿಂಗಳಿನಿಂದಿಚೇಗೆ ಆಲದೇವರ ಹಸೂರಿನಲ್ಲಿ ಕೂಲಿ ಕಾರ್ಮಿಕ ಹನುಮಂತ ಎಂಬುವವರು ಆನೆ ದಾಳಿಗೆ ಒಳಗಾಗಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಕಾಡಾನೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಇದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಬಗ್ಗೆ ಅರಣ್ಯ ಇಲಾಖೆಯವರ ಗಮನದಲ್ಲಿದ್ದರೂ ಕ್ರಮ ಕೈಗೊಳ್ಳದೇ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ಹೊರಹಾಕಿದರು.

ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚು ವಾಸಿಸುತ್ತಿದ್ದು, ರೈತರು ಪುನರ್ವಸತಿ ಕಲ್ಪಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಅಲ್ಪಸ್ವಲ್ಪ ಪ್ರಮಾಣದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ತೆಂಗು, ಅಡಿಕೆ,ಭತ್ತ, ಬಾಳೆ, ಜೋಳ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಾ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ, ಕಳೆದ ಮೂರು ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.ಆನೆಗಳು ಗ್ರಾಮದೊಳಗೆ ಮತ್ತು ಜಮೀನುಗಳಿಗೆ ನುಗ್ಗದಂತೆ ತಡೆಯಲು ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದ್ದರು ಸಹ ಅರಣ್ಯ ಇಲಾಖೆಯವರು ನಾಮಕಾವಸ್ತೇ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪುರದಾಳು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಎಸ್ ಹೆಬ್ಬೂರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪ ಸಂರಕ್ಷಣಾಧಿಕಾರಿಗಳ ಮೂಲಕ ಅರಣ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುರದಾಳು ಗ್ರಾ.ಪಂ ಉಪಾಧ್ಯಕ್ಷ ಪ್ರದೀಪ್ ಎಸ್ ಹೆಬ್ಬೂರು, ಸದಸ್ಯರಾದ ಮಾನಸ ಹೆಬ್ಬೂರು, ಕುಸುಮಾ ಜಗದೀಶ್, ಗ್ರಾಮಸ್ಥರಾದ ಪ್ರಭಾಕರ್ ಸಂಪೋಡಿ, ಆಶೋಕ್, ಗೋಪಾಲ್, ಮುಕುಂದಪ್ಪ ಕಿಡದುಂಬೆ, ಮುಕುಂದ ಎಂ.ಜಿ., ಕೃಷ್ಣಮೂರ್ತಿ ಹಿಳ್ಳೋಡಿ, ನಾಗರಾಜ್, ಸುರೇಶ್ ಜಿ., ವಸಂತ ಹಿಳ್ಳೋಡಿ, ಬಸವರಾಜ್,ರವಿ ಸಂಪೋಡಿ, ಕೋದಂಡ, ಶಿವಪ್ಪ ಸೇರಿದಂತೆ ನೂರಾರು ರೈತರು ಇದ್ದರು. ಪ್ರತಿಭಟನಾ ಸ್ಥಳಕ್ಕೆ ಬಂದ ಗ್ರಾಮಾಂತರ ಶಾಸಕಿ ಶಾರದಾ ಪೂರ್‍ಯಾನಾಯ್ಕ ಪ್ರತಿಭಟನೆಗೆ ಬೆಂಬಲ ನೀಡಿದರು.