ಶಿವಮೊಗ್ಗ :- ಕೇಂದ್ರ ಸರ್ಕಾರದ ನೂತನ ಜಿಎಸ್ಟಿ ನೀತಿಯ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಅವರು ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಜಿಎಸ್ಟಿಗೆ ಸಂಬಂಧಿಸಿದಂತೆ ಕೇಂದ್ರದಲ್ಲಿನ ಎನ್ ಡಿಎ ಸರ್ಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಸ್ಪಷ್ಟ ಆರ್ಥಿಕ ನೀತಿ ಜಗತಿಕ ಮಟ್ಟದಲ್ಲಿ ಭಾರತ 4ನೇ ಸ್ಥಾನಕ್ಕೆ ಏರುವಂತೆ ಮಾಡಿದೆ. ಹೊಸ ಜಿಎಸ್ ಟಿ ನೀತಿಯಿಂದ ರಾಜ್ಯಕ್ಕೆ 14-15 ಸಾವಿರ ಕೋಟಿ ಆದಾಯ ನಷ್ಷವಾಗಿರಬಹುದು. ಆದರೆ ಒಟ್ಟಾರೆ ದೇಶದ ಆರ್ಥಿಕ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನೀತಿ ತಂದಿದೆ. ರಾಜ್ಯದ ಹಣಕಾಸನ್ನು ಯಾವ ರೀತಿ ಉತ್ತಮ ಪಡಿಸಬೇಕು. ಯಾವ ರೀತಿ ತೆರಿಗೆ ಹೆಚ್ಚು ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಹಿತ ಎಷ್ಟು ಮುಖ್ಯವೋ ದೇಶದ ಹಿತವೂ ಅಷ್ಟೇ ಮುಖ್ಯ ಎಂಬುದನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿದುಕೊಳ್ಳಬೇಕು. ಎರಡೂವರೆ ವರ್ಷದಿಂದ ಕೇಂದ್ರದಿಂದ ವಿವಿಧ ಅನುದಾನ ಪಡೆದುಕೊಳ್ಳುತ್ತಿದ್ದರೂ ಸಿಎಂ, ಡಿಸಿಎಂ ಅಪಪ್ರಚಾರ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.
ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ, ಬಾನು ಮುಷ್ತಾಕ್ ಜೊತೆ ಅವರ ಕೃತಿ ಅನುವಾದಕರಾದ ದೀಪ್ತಿ ಬಸ್ತಿ ಅವರಿಗೂ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರಕಿದೆ. ಕೇವಲ ಬಾನು ಅವರಿಗೆ ಆಹ್ವಾನಿಸಿ ಹಿಂದೂ ಆದ ದೀಪ್ತಿ ಅವರನ್ನು ಯಾಕೆ ಆಹ್ವಾನಿಸಲಿಲ್ಲ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂದು ಹೇಳುವುದರ ಮೂಲಕ ಏನು ಮಾಡಲಿಕ್ಕೆ ಹೊರಟಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ ಅವರು ಧರ್ಮಸ್ಥಳದ ಕೋಟ್ಯಂತರ ಭಕ್ತರ ಪರವಾಗಿ ಬಿಜೆಪಿ ಧರ್ಮಸ್ಥಳ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಧರ್ಮಸ್ಥಳದ ಕೋಟ್ಯಂತರ ಭಕ್ತರ ತಾಳ್ಮೆ ಪರೀಕ್ಷಿಸದಿರಿ ಎಂದು ಕಾಂಗ್ರಸ್ಸಿಗೆ ತಾಕೀತು ಮಾಡಿದ ಅವರು ಪ್ರಾಮಾಣಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳದ ಹೆಸರು ಕೆಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಮ್ಮದ್ ಸಮೀರನನ್ನು ತಕ್ಷಣ ಬಂಧಿಸಲಿ ಎಂದು ಸವಾಲು ಹಾಕಿದರು.
ಧರ್ಮಸ್ಥಳದ ಬಗ್ಗೆ ಎಸ್ ಐಟಿ ರಚಿಸುವುದಿಲ್ಲ ಎಂದು ಮೊದಲು ಹೇಳಿದವರು ನಂತರ ರಾತ್ರೋರಾತ್ರಿ ಎಸ್ ಐಟಿ ರಚಿಸಿದ್ದರ ಕಾರಣವೇನು ಎಂಬುದನ್ನು ಸಿಎಂ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ, ಆ ನಿಗಮವೊಂದೇ ಅಲ್ಲ ಎಲ್ಲ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಎಟಿಎಂ ಇದ್ದ ಹಾಗೆ. ಆದ್ದರಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಅದರ ಹೈಕಮಾಂಡ್ ಹಪಹಪಿಸುತ್ತಿದೆ ಎಂದು ಟೀಕಾಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ, ಪ್ರಮುಖರಾದ ಕೆ.ಬಿ.ಅಶೋಕ ನಾಯ್ಕ, ಕೆ.ವಿ.ಅಣ್ಣಪ್ಪ, ಶ್ರೀನಿವಾಸ್, ವಿಕ್ರಮ್ ಮೊದಲಾದವರಿದ್ದರು.