
ಶಿವಮೊಗ್ಗ :- ನಗರದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಗೂ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದಿಂದ ಮನವಿ ಸಲ್ಲಿಸಲಾಯಿತು.
ರಾಜಕಾರಣಿಗಳ ಹುಟ್ಟುಹಬ್ಬಗಳಿಗೆ ಶುಭಕೋರುವ ನೆಪದಲ್ಲಿ, ಅಡಿಗಲ್ಲು ಕಾರ್ಯಕ್ರಮ , ಉದ್ಘಾಟನಾ ಸಮಾರಂಭಗಳು, ಮಂತ್ರಿ ಮಹಾಶಯರು ನಗರಕ್ಕೆ ಭೇಟಿನೀಡುವ ಸಂದರ್ಭದಲ್ಲಿ ಸ್ವಾಗತಕೋರುವ ದೊಡ್ಡ ದೊಡ್ಡ ಫ್ಲೆಕ್ಸ್ ಬ್ಯಾನರ್ಗಳು ಪ್ರಮುಖ ರಸ್ತೆಗಳು ಸೇರಿದಂತೆ ಕಂಡ ಕಂಡ ಮರಗಳು, ವಿದ್ಯುತ್ ಕಂಬಗಳು ಮತ್ತು ಟ್ರಾಫಿಕ್ ಭರಿತ ಸರ್ಕಲ್ಗಳನ್ನು ಆವರಿಸಿಕೊಂಡು ನಗರದ ಸೌಂದರ್ಯವನ್ನು ಹಾಳುಗೆಡವಲಾಗುತ್ತಿದೆ.
ಕಟೌಟ್ಗಳನ್ನು ಉದ್ದೇಶದಿಂದ ದೊಡ್ಡ ದೊಡ್ಡ ಮರಗಳನ್ನು ಕಡಿಯುತ್ತಿರುವುದು ಖೇದಕರ ಸಂಗತಿಯಾಗಿದೆ. ಈ ರಾಸಾಯನಿಕಯುಕ್ತ ಫ್ಲೆಕ್ಸ್ ಪರದೆಗಳು ಪರಿಸರಕ್ಕೆ ಬಹಳ ಹಾನಿಕರವಾಗಿದ್ದು, ಮಣ್ಣಿನಲ್ಲಿ ಕೊಳೆತು, ಮಣ್ಣಾಗಲು ನೂರಾರು ವರ್ಷಗಳೇ ಬೇಕಾಗುತ್ತದೆ. ವಿಶ್ವ ಪರಿಸರ ದಿನಾಚರಣೆ ೨೦೨೫ರ ಘೋಷವಾಕ್ಯವು ಬೀಟ್ ದಿ ಪ್ಲಾಸ್ಟಿಕ್ ಪೊಲ್ಯುಷನ್ ಆಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆಯು ಅಗತ್ಯ ಅನುಷ್ಟಾನಗಳ ಕಾಯ್ದೆಯಡಿ ಕಲ್ಯಾಣ ಮಂದಿರದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಹಾಗೂ ಇತರ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಕಪ್, ಪ್ಲಾಸ್ಟಿಕ್ ಚಮಚ ಮತ್ತು ಪ್ಲಾಸ್ಟಿಕ್ ಲೇಪಿತ ಪೇಪರ್ ತಟ್ಟೆಗಳನ್ನು ಸಂಪೂರ್ಣ ನಿಷೇಧಿಸಬೇಕು.
ಫ್ಲೆಕ್ಸ್ ಬ್ಯಾನರ್ಗಳನ್ನು ಬೆಂಗಳೂರು ಮಾದರಿಯಲ್ಲಿ ಬಟ್ಟೆ ಬ್ಯಾನರ್ಗಳನ್ನು ಬಳಸುವಂತೆ ನಿರ್ದೇಶಿಸಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು, ಬೀದಿಬದಿ ವ್ಯಾಪಾರಿಗಳು, ತಿಂಡಿಗಾಡಿಗಳು ತರಕಾರಿ ಹಣ್ಣಿನ ವ್ಯಾಪಾರಿಗಳು ಹಾಗೂ ವರ್ತಕರು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಬಯೋಡಿಗ್ರೇಡಬಲ್ ಚೀಲಗಳನ್ನು ಬಳಸುವಂತೆ ಕಟ್ಟುನಿಟ್ಟಿನಿ ಕಾನೂನು ಅನುಷ್ಠಾನ ಮಾಡಬೇಕು. ಚರಂಡಿಗಳು ಹಾಗೂ ರಾಜಕಾಲುವೆಗಳಿಗೆ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳನ್ನು ಹಾಕದಂತೆ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ನಿರ್ದೇಶನ ನೀಡಬೇಕು. ಈ ಎಲ್ಲಾ ಕಾರಣಗಳಿಂದ ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರಕ್ಕಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಬಿ. ಅಶೋಕ್ಕುಮಾರ್, ನವ್ಯಶ್ರೀ ನಾಗೇಶ್, ಬಾಲುನಾಯ್ಡು, ನಾಗರಾಜ್ ಶೆಟ್ಟರ್ ಮತ್ತಿರರಿದ್ದರು.