ಶಿವಮೊಗ್ಗ, : ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜು. 22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು. ಹಾಗೂ ಎಡದಂಡೆ ನಾಲೆಗೆ ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26 ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಇಂದು ಮಲವ ಗೊಪ್ಪದ ಭದ್ರ ಕಾಡಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ, ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜು. 22 ರಿಂದ ಬಲದಂಡೆ ನಾಲೆಗೆ120 ದಿನಗಳ ಕಾಲ ನೀರು ಹರಿಸಲು ಸಭೆ ನಿರ್ಧರಿಸಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು . ಶೀಘ್ರದಲ್ಲೇ ಎಡದಂಡ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದೆಂದರು.
ಕಾಡಾ ವ್ಯಾಪ್ತಿಯಲ್ಲಿ ೫೩೭ ನೀರು ಬಳಕೆದಾರರ ಸಂಘಗಳಿದ್ದು, ಇವುಗಳಿಗೆ ನೀರು ಬಳಕೆ, ಇತರೆ ರೈತ ಚಟುವಟಿಕೆ ಕುರಿತು ಕಾರ್ಯಾಗಾರ ಮಾಡಿದರೆ ಒಳಿತು ಎಂದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮಂಗಳವಾರ ದಿಂದಲೇ ನೀರು ಬಿಟ್ಟರೆ ಒಳಿತಾಗುತ್ತದೆ. ಹರಪನಹಳ್ಳಿ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ರೈತಪರ ಕಾಳಜಿವಹಿಸಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕು. ಅಕ್ರಮ ಪಂಪ್ ಸೆಟ್ ತೆರವು ಕಷ್ಟವಾಗಿದೆ. ಕೆರೆ ತುಂಬಿಸಲು, ಕುಡಿಯುವ ನೀರಿಗಾಗಿ ಭದ್ರಾ ನಾಲೆಯನ್ನು ಸೀಳುತ್ತಾ ಹೋಗುವುದು ಅಷ್ಟು ಸರಿಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕಷ್ಟ ಆಗುತ್ತದೆ. ಜಲಾಶಯ ಉಳಿವಿಗೆ ಹೆಚ್ಚು ಅನುದಾನ ಸರ್ಕಾರ ನೀಡಬೇಕು. ನಾಲೆಗಳು ಕೆಲವೆಡೆ ಹೊಡೆದಿದ್ದು ರಿಪೇರಿ ಹಾಗೂ ಹೂಳು ತೆಗೆಯಲು ಅನುದಾನ ನೀಡಬೇಕು. ಹಾಗೂ ನಾಲೆ ಸೀಳುವುದನ್ನು ಸಭೆ ವಿರೋಧಿಸಬೇಕೆಂದು ಮನವಿ ಮಾಡಿದರು.
ಹೊನ್ನಾಳಿ ಶಾಸಕ ಶಾಂತನಗೌಡ ಮಾತನಾಡಿ ನಾಳೆಯಿಂದಲೇ ನೀರು ಬಿಟುವ ಬಗ್ಗೆ ನೀರಿನ ವಿಳಾಸ ಪಟ್ಟಿಯನ್ನು ಸಿದ್ದಪಡಿಸಿದರೆ ಒಳಿತು. ಕೊನೆ ಭಾಗದ ರೈತರಿಗೂ ನೀರು ಸಿಗಬೇಕು ಎಂದರು.
ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ, ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್, ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಬಲ್ಕಿಷ್‌ಭಾನು, ಸಮಿತಿ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿದರು.ರೈತ ಮುಖಂಡರು, ತುಂಗಾ ದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಯೋಜನೆ ಜಾರಿ ಮಾಡಬೇಕು ಹಾಗೂ ಎಡದಂಡೆಗೆ ಆ.1 ರಿಂದ ನೀರು ಬಿಡಲು ಮನವಿಮಾಡಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಕಟ್ಟಕಡೆಯ ರೈತರಿಗೂ ಯಾವುದೇ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರ ಹಿತ ರಕ್ಷಿಸಲು ಸದಾ ಸಿದ್ದವಾಗಿದ್ದೇವೆ ಎಂದರು.