google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿರುವ ಆಟದ ಮೈದಾನದ ಹಕ್ಕುಗಾರಿಕೆಗೆ ಸಂಬಂಧಿಸಿದಂತೆ ಯಾರ ಪ್ರಭಾವಕ್ಕೂ ಒಳಗಾಗದೆ ಮಹಾನಗರ ಪಾಲಿಕೆ ಆಯುಕ್ತರು ಅದನ್ನು ಪಾಲಿಕೆ ಆಸ್ತಿಯಾಗಿ ಉಳಿಸಿಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.

ಅವರು ಇಂದು ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೇಲ್ಕಂಡ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಪಾಲಿಕೆ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಸದರಿ ಜಗದ ಖಾತೆಯನ್ನು ನಿಯಮಬಾಹಿರವಾಗಿ ವಕ್ಫ್‌ಬೋರ್ಡ್ ಹೆಸರಿಗೆ ಮಾಡಿದ್ದನ್ನು ಪ್ರಶ್ನೆಮಾಡಿ, ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಸಲಾಗಿತ್ತು. ಆಯುಕ್ತರು, ಯಾವುದೇ ಕ್ರಮ ಕೈಗೊಳ್ಳದ ಕಾರಣ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯ ಈಗ ಎಂಟು ವಾರದೊಳಗೆ ಸದರಿ ಜಗದ ಬಗ್ಗೆ ದಾಖಲಾತಿಗಳನ್ನು ನೀಡಬೇಕು ಎಂದು ತಿಳಿಸಿತ್ತು. ಕೊಟ್ಟ ಅವಧಿ ಜುಲೈ 17ಕ್ಕೆ ಮುಗಿದಿದೆ. ಈ ಹಿಂದೆ ಸಲ್ಲಿಸಿದ ದಾಖಲೆಗಳಲ್ಲದೆ ಮತ್ತೆ ಜುಲೈ ೧ರಂದು ನಾವು ಆಯುಕ್ತರಿಗೆ ಹೆಚ್ಚುವರಿ ದಾಖಲೆಗಳನ್ನು ನೀಡಿದ್ದೆವು ಎಂದರು.

ನಾವು ನೀಡಿದ ದಾಖಲೆ ಪ್ರಕಾರ ಹಕ್ಕುಗಾರಿಕೆ ಸಾಬೀತುಪಡಿಸುವಂತಹ ದಾಖಲೆಗಳು ವಕ್ಫ್ ಮಂಡಳಿ ಬಳಿ ಇರುವುದಿಲ್ಲ. ಹಾಗಾಗಿ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದನ್ನು ರದ್ದುಪಡಿಸಬೇಕು ಮತ್ತು ಕಾನೂನುಬಾಹಿರವಾಗಿ ಖಾತೆಮಾಡಿಕೊಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ಜಗವನ್ನು ಪಾಲಿಕೆ ಆಸ್ತಿಯನ್ನಾಗಿ ಉಳಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಜು. 21ರ ಸೋಮವಾರ ಮತ್ತೆ ದಾಖಲೆಗಳೊಂದಿಗೆ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗುವುದು. ಇಷ್ಟಾದ ಮೇಲೂ ಇದನ್ನು ಪಾಲಿಕೆ ಸ್ವತ್ತಾಗಿ ಉಳಿಸದೇ ಹೋದರೆ ಹಿಂದೂ ಸಮಾಜ ಸುಮ್ಮನಿರುವುದಿಲ್ಲ. ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಬಗ್ಗೆ ಗಮನಹರಿಸಲಿ, ಬಡವರ ಪರವಾಗಿ ಇರಲಿ, ಸಾಧನಾ ಸಮಾವೇಶಗಳನ್ನೂ ಮಾಡಲಿ, ಆದರೆ ಅಭಿವೃದ್ಧಿಯನ್ನು ಕುಂಠಿತಗೊಳಿಸುವುದು ಸರಿಯಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆಗಳು ನಿರ್ಮಾಣವಾಗುವುದಿರಲಿ, ಗುಂಡಿಬಿದ್ದ ರಸ್ತೆಗಳಿಗೆ ಮಣ್ಣುಹಾಕುವ, ಗುಂಡಿ ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಎಂದು ಟೀಕಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ. ವಿಶ್ವಾಸ್, ಬಾಲು, ಕುಬೇರಪ್ಪ, ಸತ್ಯನಾರಾಯಣ್, ವಾಗೀಶ್, ಅ.ಮ. ಪ್ರಕಾಶ್ ಇದ್ದರು.

Leave a Reply

Your email address will not be published. Required fields are marked *