google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಬಹು ನಿರೀಕ್ಷಿತ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಹೊಳೆಬಾಗಿಲು-ಕಳಸವಳ್ಳಿ (ಸಿಗಂದೂರು) ನೂತನ ಸೇತುವೆಯ ಲೋಕಾರ್ಪಣೆಯನ್ನು ಜುಲೈ 14 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮಿಸಲಿದ್ದಾರೆ. ಎಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಬಗ್ಗೆ ಸ್ಥಳ ನಿಗದಿಯಾಗಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಸಮಾಲೋಚಿಸಿ ಸ್ಥಳ ನಿಗದಿ ಮಾಡಲಿದ್ದಾರೆ ಎಂದರು.

ಹಸಿರುಮಕ್ಕಿ, ಸಿಗಂಧೂರು ಸೇತುವೆ ಬಗ್ಗೆ ಕಾಂಗ್ರೆಸ್ಸಿಗರು ಟೀಕೆ ಮಾಡುತ್ತಿದ್ದಾರೆ. ನಮ್ಮ ಅಭಿವೃದ್ಧಿ ಕೆಲಸಗಳೇ ಅವರಿಗೆ ಉತ್ತರವಾಗಲಿದೆ. ದೇಶದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರು.

ಸಿಗಂಧೂರು ಸೇತುವೆ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದು, ನಮ್ಮ ತಂದೆ ಬಿ.ಎಸ್. ಯಡಿಯೂರಪ್ಪನವರು. ಅವರ ಕಾಲದಲ್ಲಿ ಸುಮಾರು 371 ಕೋಟಿ ರೂ.ಗಳ ವೆಚ್ಚದಲ್ಲಿ 2008ರಲ್ಲಿಯೇ ಅಡಿಗಲ್ಲು ಹಾಕಲಾಗಿತ್ತು. ನಂತರದಲ್ಲಿ ಆ ಹಣ ವಾಪಾಸ್ಸು ಕೂಡ ಹೋಗಿತ್ತು. ನನು ಸಂಸದನಾದ ಮೇಲೆ ಅದು ಮತ್ತೆ ಮರಳಿಬರುವಂತೆ ಮಾಡಿ, ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಿದೆವು. ಈಗ ಕಾಲಕೂಡಿ ಬಂದಿದೆ. ಮುಹೂರ್ತ ಕೂಡ ಫಿಕ್ಸ್ ಆಗಿದೆ ಎಂದರು.

ಅನೇಕರು ಈ ಸೇತುವೆ ನಿರ್ಮಾಣಕ್ಕಾಗಿ ಒತ್ತಾಯ ಮಾಡಿದ್ದಾರೆ. ಇದು ಬಹುದಿನದ ಕನಸಾಗಿದೆ. ಮತ್ತು ದೇಶದ ಅತ್ಯಂತ ಉದ್ದದ 2ನೇ ಸೇತುವೆ ಇದು. ಶರಾವತಿ ಸಂತ್ರಸ್ತರಿಗೆ ಜೀವ ನೀಡುವ ಯೋಜನೆ ಇದಾಗಿದೆ. ಇದರ ಜೊತೆ ಜೊತೆಯಲ್ಲಿಯೇ ಸುಮಾರು 5 ಕಡೆ ವಿವಿಧ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಅವೆಲ್ಲವೂ ಶೀಘ್ರವೇ ಮುಗಿಯಲಿದೆ. ಸುಮಾರು 315 ಕೋಟಿ ರೂ. ವೆಚ್ಚದಲ್ಲಿ ಪಟುಗೊಪ್ಪ ಮತ್ತು ಹಸಿರುಮಕ್ಕಿ ಸೇತುವೆಗಳು ನಿರ್ಮಾಣವಾಗಿವೆ. ಇವೆಲ್ಲವೂ ಈ ಸೇತುವೆಗೆ ಸಂಪರ್ಕ ಕಲ್ಪಿಸಲಿದೆ. ಹಾಗಾಗಿ ಈ ಭಾಗದಲ್ಲಿ ಒಟ್ಟು ೬ ಸೇತುವೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಿದೆ ಎಂದರು.

ಸಿಗಂಧೂರು ಸೇತುವೆಯ ಲೋಕಾರ್ಪಣೆಯ ಹಿನ್ನಲೆಯಲ್ಲಿ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂಬ ಕಾರಣಕ್ಕೆ ಅಧಿಕಾರಿಗಳ ಜೊತೆ ವೀಕ್ಷಣೆಮಾಡಲು ಅಲ್ಲಿಗೆ ಹೋಗಿದ್ದೆವು. ಅಲ್ಲಿ ಯಾವುದೇ ಫೋಜು ಕೊಡಲು ನಾವು ಹೋಗಿಲ್ಲ. ಟೀಕೆ ಮಾಡುವವರು ಮಾಡಲಿಬಿಡಿ ಎಂದರು.

ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶದ ರಸ್ತೆಗಳ ಬಗ್ಗೆ ಆಸಕ್ತಿವಹಿಸಿದೆ. ಬಿಜೆಪಿ ಸರ್ಕಾರ ಬರುವ ಮೊದಲು ಕೇವಲ 90 ಸಾವಿರ ಕಿ.ಮೀ. ರಸ್ತೆ ಇತ್ತು. ಆದರೆ ಈಗ ಅದು 1.50 ಲಕ್ಷದಷ್ಟು ಹೆಚ್ಚಾಗಿದೆ. ಅಂದರೆ ಶೇ. 10ರಷ್ಟು ಹೆಚ್ಚು ರಸ್ತೆಗಳನ್ನು ಕೇಂದ್ರ ಸರ್ಕಾರ ನಿರ್ಮಿಸಿದೆ. ಗಡಿರಸ್ತೆಗಳು, ನಿರ್ಲಕ್ಷ್ಯಕ್ಕೆ ಒಳಗಾದ ಕುಗ್ರಾಮ ರಸ್ತೆಗಳನ್ನು ಕೂಡ ಗುರುತಿಸಿ ರಸ್ತೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಸುಮಾರು 20 ಸಾವಿರ ಕೋಟಿ ರೂ. ಅನುದಾನ ಬಂದಿದೆ ಇದೆಲ್ಲಾ ಅಭಿವೃದ್ಧಿ ಅಲ್ಲವೇ ಎಂದರು.

ಸೇತುವೆಗೆ ಸಿಗಂಧೂರು ಚೌಡೇಶ್ವರಿ ಹೆಸರು ಸೂಕ್ತ…

ಸಿಗಂಧೂರು ಚೌಡೇಶ್ವರಿ ದೇವಾಲಯ ತುಂಬಾ ಪ್ರಸಿದ್ಧಿಯಾಗಿದೆ. ಆದ್ದರಿಂದ ದೇಶದ ಬಹುದೊಡ್ಡ ಈ ತೂಗು ಸೇತುವೆಗೆ ಸಿಗಂಧೂರು ಚೌಡೇಶ್ವರಿ ಸೇತುವೆ ಎಂಬ ಹೆಸರು ಸೂಕ್ತ ಎಂದುಕೊಂಡಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಆರಗ ಜನೇಂದ್ರ, ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಮುಖರಾದ ಟಿ.ಡಿ. ಮೇಘರಾಜ್, ಎಸ್.ಎಸ್. ಜ್ಯೋತಿಪ್ರಕಾಶ್, ಕೆ.ಜಿ. ಕುಮಾರ್‌ಸ್ವಾಮಿ, ಆರ್.ಕೆ. ಸಿದ್ರಾಮಣ್ಣ, ಸಿ.ಹೆಚ್. ಮಾಲತೇಶ್, ಹರಿಕೃಷ್ಣ, ವಿನ್ಸೆಂಟ್ ರೋಡ್ರೀಗಸ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ರಾಮು ಇದ್ದರು.

Leave a Reply

Your email address will not be published. Required fields are marked *