google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಮ್ಮ ಪರಿಸರದಲ್ಲಿರುವ ಉತ್ತಮ ವ್ಯಕ್ತಿತ್ವಗಳಿಂದ ಸ್ಪೂರ್ತಿ ಪಡೆಯುವಂತಹ ಆಕರ್ಷಣೆ ಯುವ ಸಮೂಹದಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಅಭಿಪ್ರಾಯಪಟ್ಟರು.

ನಗರದ ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಬಿಕಾಂ, ಬಿಬಿಎ, ಬಿಸಿಎ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ‘ಅಭ್ಯುದಯ-೨೦೨೫’ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಆಕರ್ಷಣೆಗಳು ಸಹಜ. ನಮ್ಮ ಮನಸ್ಸು ಉತ್ತಮ ಸದಾಭಿರುಚಿಯತ್ತ ಆಕರ್ಷಿತ ಆಗಬೇಕಿದೆ. ಆಧುನಿಕತೆಯ ಭರದಲ್ಲಿ ಕೆಟ್ಟ ಆಕರ್ಷಣೆಗಳಿಗೆ ಒಳಗಾಗಲು ಅನೇಕ ಅವಕಾಶಗಳಿವೆ. ಅಂತಹ ಆಕರ್ಷಣೆಗಳ ಭರದಲ್ಲಿ ಪೋಷಕರ ಕಿವಿ ಮಾತುಗಳು, ಸ್ವಾತಂತ್ರ ಹರಣವಾಗುತ್ತಿದೆ ಎಂಬ ಅಂಧತ್ವಕ್ಕೆ ದೂಡಿಬಿಡುತ್ತದೆ. ಪೋಷಕರ ಮತ್ತು ಶಿಕ್ಷಕರ ಅನುಭವದ ಕಿವಿ ಮಾತಿಗೆ ಮನ್ನಣೆ ನೀಡಿ.

ತಪ್ಪುಗಳೆಂಬುದು ಬದುಕಿನಲ್ಲಿ ಆಗುವ ಸಹಜ ಪ್ರಕ್ರಿಯೆ. ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾರ್ಥಿ ಜೀವನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ನಿಮ್ಮ ಉತ್ತಮ ವ್ಯಕ್ತಿತ್ವದ ಮೂಲಕ ಪೋಷಕರಲ್ಲಿ ಜೀವನ ಸಾರ್ಥಕತೆ ನೀಡುವಂತಾಗಲಿ ಎಂದು ಹಾರೈಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಾಪಾಡುವುದು ಯುವ ಸಮೂಹದ ಮೇಲಿರುವ ದೊಡ್ಡ ಜವಾಬ್ದಾರಿ. ಶಿಕ್ಷಕರು ಶಾಲೆಯಲ್ಲಿ ಪೋಷಕರು, ಪೋಷಕರು ಮನೆಯಲ್ಲಿ ಶಿಕ್ಷಕರು ಎಂಬ ಧ್ಯೇಯೊದ್ದೇಶದಲ್ಲಿ ವಿದ್ಯಾ ಸಂಸ್ಥೆಗಳು ನಡೆಯುತ್ತಿರುತ್ತದೆ. ಹಾಗಾಗಿ ಪೋಷಕರು, ವಿದ್ಯಾಸಂಸ್ಥೆಗೆ ಮಕ್ಕಳನ್ನು ದಾಖಲಾತಿ ಮಾಡಿದ ನಂತರ ಪ್ರತಿ ಹಂತದಲ್ಲಿ ಅವರ ಕಲಿಕೆ, ಸೃಜನಶೀಲತೆಯ ಕುರಿತಾಗಿ ಗಮನ ವಹಿಸಿ ಎಂದು ಹೇಳಿದರು.

ಖ್ಯಾತ ವೈದ್ಯೆ ಡಾ.ರಕ್ಷಾ ರಾವ್ ಮಾತನಾಡಿ, ಪದವಿ ಶಿಕ್ಷಣವು ಯುವ ಸಮೂಹದ ಹೊಸತನದ ಜವಾಬ್ದಾರಿಯತ್ತ ತೆರೆದುಕೊಳ್ಳುತ್ತದೆ. ಅಲ್ಲಿ ಆಲೋಚನಾ ಪ್ರೌಢಿಮೆ ಹೆಚ್ಚಾಗಬೇಕು. ಒತ್ತಡಗಳನ್ನು ಒಂದೇ ರೀತಿಯಲ್ಲಿ ನಿರ್ವಹಿಸಿ. ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಿ. ಅದು ಬದುಕಿನ ಯಶಸ್ಸಿಗೆ ಅಮೃತ ದರ್ಶಿನಿಯಾಗಿ ಕಾಪಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಆಜೀವ ಸದಸ್ಯರಾದ ಡಾ.ಭರತ್, ರಾಮಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *