ಶಿವಮೊಗ್ಗ :- ಸರ್ಕಾರಿ ಶಾಲೆಗಳಿಗೆ ಕಾಯಕಲ್ಪಸಿಗುತ್ತಿರುವುದು ಸ್ವಾಗತದ ಸಂಗತಿ ಎಂದು ಲೇಖಕ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು.
ಅವರು ಗಾಡಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಕ್ಯಾಂಪ್ ಶಾಲೆಯಲ್ಲಿ ನಲಿಕಲಿ ಕ್ರಿಯಾಶೀಲ ತಾರೆಯರು, ವೃಕ್ಷ ಸ್ವಸಹಾಯ ಸಂಘ, ಮಾರುತಿ ಮೆಡಿಕಲ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಕಲಿಕಾ ಕಿಟ್ಟು ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಶಾಲಾಗಳ ಬಗ್ಗೆ ಇರುವ ತಾತ್ಸಾರ ಕಡಿಮೆಯಾಗಬೇಕು. ಸರ್ಕಾರ ಇದಕ್ಕಾಗಿ ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಸಂಘ ಸಂಸ್ಥೆಗಳು, ಶಾಲಾಭಿವೃದ್ಧಿ ಸಮಿತಿ, ಸಮುದಾಯಗಳು ಸಹಕರಿಸಬೇಕು. ಈ ನಿಟ್ಟಿನಲ್ಲಿ ನಲಿಕಲಿ ತಾರೆಯರ ತಂಡದ ಕೆಲಸ ಶ್ಲಾಘನೀಯವಾಗಿದೆ. ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಅಭಿಮಾನ ಎಲ್ಲರಲ್ಲೂ ಮೂಡಬೇಕು ಎಂದರು.
ಡಯಟ್ ಕಾಲೇಜಿನ ಪ್ರಾಂಶುಪಾಲೆ ಹಾಗೂ ಉಪನಿರ್ದೇಶಕಿ (ಅಭಿವೃದ್ಧಿ) ಬಿಂಬ ಕೆ.ಆರ್.ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ಅನೇಕ ಸಂಘ ಸಂಸ್ಥೆಗಳು ಕಲಿಕಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ಸ್ವಾಗತದ ವಿಷಯ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಭಾಗೀರಥಿ, ವೃಕ್ಷ ಸ್ವಸಹಾಯ ಸಂಘದ ಮಂಜುನಾಥ್, ವಾಸುಕಿ, ರೇಡಿಯೋ ೯೦.೮ನ ಜನಾರ್ಧನ್ (ಗುರುಪ್ರಸಾದ್) ಇವರುಗಳನ್ನು ಸನ್ಮಾನಿಸಲಾಯಿತು.ವೃಕ್ಷ ಸ್ವಸಹಾಯ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಕಿಟ್ಟು ಹಾಗೂ ಗಿಡಗಳನ್ನು ನೀಡಲಾಯಿತು. ಮಾರುತಿ ಮೆಡಿಕಲ್ಸ್ ಅವರು ಶಿವಮೊಗ್ಗ ಜಿಲ್ಲೆಯ ಆಯ್ದ ಶಾಲೆಗಳಿಗೆ ಸುಮಾರು ೧೨ ಸಾವಿರ ನೋಟ್‌ಬುಕ್‌ಗಳನ್ನು ಮತ್ತು ದಾನಿಗಳಿಂದ ಮಕ್ಕಳಿಗೆ ಟೈ ಹಾಗೂ ಕಲಿಕಾ ಸಾಮಾಗ್ರಿ ವಿತರಿಸಲಾಯಿತು.
ನಲಿಕಲಿ ತಾರೆಯರ ತಂಡದ ಅಧ್ಯಕ್ಷೆ ಫೌಜಿಯಾ ಸರಾವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಸ್‌ಸಿ ಅಧ್ಯಕ್ಷ ಗಿರೀಶ್ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್, ಮೊಹಮ್ಮದ್ ಜರ್ಫುಲ್ಲಾ, ಗುರುಪ್ರಸಾದ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಘಣ್ಣನವರ್, ಶಿಕ್ಷಣ ಸಂಯೋಜಕ ಕಲ್ಲೇಶ್, ಶಿಕ್ಷಕಿಯರಾದ ಶೋಭಾ, ಭಾಗೀರತಿ, ಸುನಂದ, ಪರಮೇಶ್, ಭುವನೇಶ್ವರಿ, ಕಾಂತಮಣಿ ಮುಂತಾದವರು ಉಪಸ್ಥಿತರಿದ್ದರು.
