
ಶಿವಮೊಗ್ಗ :- ಜಿಲ್ಲೆಯಲ್ಲಿ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಸಾಗರ, ಹೊಸನಗರ, ತೀರ್ಥಹಳ್ಳಿ, ಆಗುಂಬೆ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಜೋಗ ಜಲಪಾತಕ್ಕೆ ಪ್ರವಾಸಿಗರ ತಂಡ ಹರಿದು ಬರುತ್ತಿದೆ.
ವಾರಾಂತ್ಯದಲ್ಲಿ ಎರಡು ದಿನ ರಜೆ ಇದ್ದುದರಿಂದ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಜೋಗ ಜಲಪಾತದ ವೈಭವ ಮತ್ತೆ ಮರುಕಳಿಸಿದೆ. ರಾಜ, ರಾಣಿ, ರೋರರ್ ಮತ್ತು ರಾಕೇಟ್ ಜಲಪಾತಗಳು ಮೈದುಂಬಿಕೊಂಡಿವೆ.
ಪ್ರವಾಸಿಗರು ಸೆಲ್ಫಿಫೋಟೋ ಕ್ಲಿಕ್ಕಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರಲ್ಲಿ ಸಂತಸ ತಂದಿದೆ.
ತುಂಗಾ ಜಲಾಶಯ ಭರ್ತಿ :

ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಹೆಚ್ಚಳವಾಗಿದ್ದು, ತುಂಗಾನದಿ ಮೈದುಂಬಿ ಹರಿಯುತ್ತಿದೆ. ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿ ಇರುವ ಮಂಟಪ ಮುಕ್ಕಾಲು ಭಾಗ ಮುಳುಗಿದೆ.
ಜಲಾಶಯದ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಜಲಾಶಯಕ್ಕೆ ೩೧ ಸಾವಿರ ಕ್ಯೂಸೆಕ್ ಒಳಹರಿವು ಇದ್ದು, 27 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಗೋಡೆ ಕುಸಿದು ವೃದ್ಧೆ ಸಾವು : ಮಹಿಳೆ ಗಂಭೀರ :

ಆಯನೂರು ಸಮೀಪ ಭಾರೀ ಮಳೆಗೆ ಮನೆಗೋಡು ಕುಸಿದು ವೃದ್ಧೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ.
ಶಿವಮೊಗ್ಗ ತಾಲ್ಲೂಕಿನ ಆಯನೂರು ಸಮೀಪದ ಮಂಡಗಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಡುಗಡಿ ಗ್ರಾಮದಲ್ಲಿ ಕಳೆದ ರಾತ್ರಿ ಭಾರೀ ಮಳೆಗೆ ಮನೆಯ ಗೋಡು ಕುಸಿದಿದ್ದು, ವೃದ್ಧೆ ಸಿದ್ದಮ್ಮ (ಶತಾಯುಷಿ)ಸಾವನ್ನಪ್ಪಿದ್ದಾರೆ. ಹೇಮಾವತಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಪರಶುರಾಮ, ಪಲ್ಲವಿ, ಚೇತನ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆಯ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಇರಿಸಲಾಗಿದ್ದು, ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
