google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ದೇಶದ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಹಾಗೂ ವಸ್ತುನಿಷ್ಟ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸುವುದು ಅಗತ್ಯ ಎಂದು ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮಗ ಶೈಲೇಶ್ ತಿಲಕ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ನಗರದಲ್ಲಿ ಶ್ರೀಗಂಧ ಸಂಸ್ಥೆಯು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ 77ನೇ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಂಹ ಹೃದಯದ ಬಾಲಗಂಗಾಧರ ತಿಲಕರು ಭಾರತ ಭವಿಷ್ಯದ ಬಗ್ಗೆ ದೂರದರ್ಶಿತ್ವ ಹೊಂದಿದವರಾಗಿದ್ದರು. ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂಬುದು ತಿಲಕರ ಘೋಷವಾಕ್ಯವಾಗಿತ್ತು ಎನ್ನುವುದಷ್ಟೇ ಇಂದಿನ ಪೀಳಿಗೆಗೆ ಗೊತ್ತು. ದೇಶದ ಇತಿಹಾಸದ ಬಗ್ಗೆ ಅರ್ಧ ಸತ್ಯವನ್ನು ಮಾತ್ರ ತಿಳಿದುಕೊಂಡಿದ್ದೇವೆ. ಸಾರ್ವಜನಿಕ ಗಣಪತಿ ಹಬ್ಬದ ಮೂಲಕ ಸೊಷಿಯಲ್ ಇಂಜನಿಯರಿಂಗ್ ಪ್ರಯೋಗವನ್ನು ತಿಲಕರು ಆರಂಭಿಸಿದ್ದರು. ಆದರೆ ಸ್ವದೇಶಿ ಚಳುವಳಿಗೆ ಅವರು ನೀಡಿದ ಕೊಡುಗೆ ಬಗ್ಗೆ ಈಗಿನವರಿಗೆ ತಿಳಿದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

1924ರ ಬೆಳಗಾವಿ ಅಧಿವೇಶನದಲ್ಲೇ 200ಕ್ಕೂ ಹೆಚ್ಚು ಸ್ವದೇಶಿ ವಸ್ತುಗಳ ಉತ್ಪನ್ನಗಳ ಮಳಿಗೆಗಳು ಸ್ಥಾಪಿತವಾಗುವ ಮೂಲಕ ತಿಲಕರು ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಅದೂ ಅಲ್ಲದೆ ಸ್ವದೇಶಿ ವಸ್ತುಗಳ ವಿನಿಮಯಕ್ಕೆ ಪ್ರಥಮ ಸಹಕಾರ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಮ್ಯಾಂಚೆಸ್ಟರ್ ನಿಂದ ಭಾರತಕ್ಕೆ ಆಮದಾಗುತ್ತಿದ್ದ ಶೇ.50ರಷ್ಟು ಸರಕುಗಳಿಗೆ ತಿಲಕ ಅವರು ಸಂಚಕಾರ ತಂದಿದ್ದರು ಎಂದು ವಿವರಿಸಿದರು.

ಶಕ್ತಿಯುತ, ಸುಸ್ಥಿರ ಭಾರತ ನಿಮಾಣದ ಕನಸನ್ನು ಕಂಡವರು ತಿಲಕರಾಗಿದ್ದರು. ಆಧುನಿಕ ಯುದ್ಧ ತಂತ್ರಗಳ ಬಳಕೆಗೆ ಆಗಲೇ ತಿಲಕರು ಮುನ್ನುಡಿ ಬರೆದಿದ್ದರು ಎಂದು ವಿವರಿಸಿದರು.

ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮಾತನಾಡಿ, ಒಂದು ತತ್ವ, ಬದ್ಧತೆ ಆಧಾದ ಮೇಲೆ ಸಮಾಜದಲ್ಲಿ ಬದಲಾವಣೆ ತರುವ ಉದ್ಧೇಶ ಈಶ್ವರಪ್ಪನವರದ್ದು. ಇನ್ನೊಬ್ಬರನ್ನು ಮುಂದಕ್ಕೆ ತಳ್ಳಿ ಆಳ ನೋಡುವವಲ್ಲ. ನಂಬಿಕೆ ಮತ್ತು ತಾತ್ವಿಕ ಹೋರಾಟದ ಮೂಲಕ ಈಶ್ವರಪ್ಪ ಗುರುತಿಸಿಕೊಂಡಿದ್ದಾರೆ. ಅವರು ಕರ್ನಾಟಕ, ಭಾರತದ ಬಗ್ಗೆ ಕಂಡ ಕನಸು ನನಸಾಗಲಿ ಎಂದು ಹಾರೈಸಿದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸ್ವಾಭಿಮಾನಿ ಭಾರತದ ಕುರಿತು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಅಂತಃಶಕ್ತಿಯ ಪುನರ್ ಜಗೃತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ನೆಲ, ನಾಡು, ಭೂಮಿಗೆ ಹತ್ತಿರವಾಗಿದ್ದಾರೆ. ಜಗತ್ತಿನಲ್ಲಿ ಎಲ್ಲರೂ ಚೆನ್ನಾಗಿರಬೇಕು ಎಂದು ಸಾರುವುದೇ ಭಾರತದ ಆತ್ಮ. ನೆಹರು ಅವರ ತುಷ್ಟೀಕರಣ ನೀತಿಯೇ ಅಂದು ಭಾರತ ವಿದೇಶಿಗರಿಗೆ ತಲೆ ಬಾಗುವ ಸ್ಥಿತಿ ನಿರ್ಮಾಣವಾಗಿತ್ತು. ಸ್ವಾತಂತ್ರ್ಯಾ ನಂತರ ಭಾರತ ಚಂದ್ರಲೋಕಕ್ಕೆ ತಲುಪಿದರೂ ಪಾಕಿಸ್ತಾನಕ್ಕೆ ಮಾತ್ರ ಇನ್ನೂ ಕಾಶ್ಮೀರ ತಲುಪಲಾಗಲಿಲ್ಲ. ಇಡೀ ಆಪರೇಷನ್ ಸಿಂಧೂರ್‌ಗೆ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿಯೇ ಪ್ರೇರಣೆ ಎಂದರು.

ಇದೇ ಸಂದರ್ಭದಲ್ಲಿ ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡು ತಾಯ್ನಾಡಿಗೆ ಮರಳಿದ ಹವಾಲ್ದಾರ್ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಉಮೇಶ್ ಆರಾಧ್ಯ, ಕೆ.ಇ. ಕಾಂತೇಶ್ ಇದ್ದರು.

Leave a Reply

Your email address will not be published. Required fields are marked *