
ಶಿವಮೊಗ್ಗ :- ನಗರದ ಹಣ್ಣು ವ್ಯಾಪಾರಿಗಳಾದ ಡಿ. ಮಲ್ಕಪ್ಪ ಅಂಡ್ ಸನ್ಸ್ ಸಂಸ್ಥೆವತಿಯಿಂದ ಜೂ. 12ರಿಂದ 14ರ ವರೆಗೆ ಎಪಿಎಂಸಿಯಾರ್ಡ್ನಲ್ಲಿ ಇರುವ ಸಂಸ್ಥೆಯ ಆವರಣದಲ್ಲಿ ವೈವಿಧ್ಯಮಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟದ ಹೊಂಬಾಳೆ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮೋಹನ್ ಬಾಳೆಕಾಯಿ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಾಸಗಿ ಸಂಸ್ಥೆಯೊಂದು ಇಂತಹ ಹಣ್ಣುಗಳ ಮಾರಾಟ ಮತ್ತು ಪ್ರದರ್ಶನವನ್ನು ಹಮಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಮೂರು ದಿನಗಳ ಕಾಲ ಬೆಳಿಗ್ಗೆ 8 ರಿಂದ ರಾತ್ರಿ 9ರವರೆಗೆ ಹಣ್ಣುಗಳ ಮಾರಾಟದ ವ್ಯವಸ್ಥೆ ಇರುತ್ತದೆ. ವಿವಿಧ ಜತಿಯ ಮಾವು, ಹಲಸು, ಬಾಳೆಯ ತಳಿಗಳು ಇಲ್ಲ. ಪ್ರದರ್ಶನಗೊಳ್ಳಲಿವೆ. 50 ರೂ. ಕೆ.ಜಿ.ಯಿಂದ ಹಿಡಿದು, ಒಂದು ಕೆ.ಜಿ.ಗೆ ಲಕ್ಷ ರೂ. ಬೆಲೆ ಬಾಳುವ ಮಿಯಾಜಕಿ ತಳಿಯ ಮಾವಿನ ಹಣ್ಣು ಈ ಪ್ರದರ್ಶನದಲ್ಲಿ ಇರುವುದು ವಿಶೇಷವಾಗಿದೆ ಎಂದರು.

ರಸಪುರಿ, ಮಲ್ಲಿಕಾ, ಶಕ್ಕರಗುಟ್ಲಿ, ಮಲಗೋಬ, ರತ್ನಗಿರಿ ಮುಂತಾದ ಮಾವಿನ ಹಣ್ಣುಗಳ ಜೊತೆಗೆ ಚಂದ್ರಹಲಸು, ಚಂದ್ರಬಕ್ಕೆ ಮುಂತಾದ ಹಲಸಿನ ಹಣ್ಣುಗಳು, ರಸಬಾಳೆ, ಪಚ್ಚಬಾಳೆ, ಪುಟ್ಟುಬಾಳೆ ಸೇರಿದಂತೆ ವಿವಿಧ ಜತಿಯ ಬಾಳೆಹಣ್ಣು, ಜೊತೆಗೆ ದಾಳಿಂಬೆ, ಸೇಬು, ನೇರಳೆ, ಮೂಸುಂಬೆ, ಕಿತ್ತಳೆ, ದ್ರಾಕ್ಷಿ ಮತ್ತು ವಿದೇಶಿ ಹಣ್ಣುಗಳಾದ ರಂಬುಟಾನ್, ಬಟರ್ ಫ್ರೂಟ್, ಗೋಲ್ಡನ್ ಕಿವಿ, ಹಿಮಾಚಲ್ ಚರಿ, ಡ್ರಾಗನ್ ಸೇರಿದಂತೆ ವಿವಿಧ ಜತಿಯ, ರುಚಿಯ ಹಣ್ಣುಗಳು ಇವೆ. ಎರಡು ಸಾವಿರ ರೂಪಾಯಿಗೆ ಒಂದು ಕೆ.ಜಿ. ಸಿಗುವ ಬ್ಲೂಬೆರ್ರಿ ಹಣ್ಣು ಕೂಡ ಸಿಗಲಿದೆ ಎಂದರು.
ಎಪಿಎಂಸಿ ಯಾರ್ಡ್ನಲ್ಲಿರುವ ಸಂಸ್ಥೆಯ ಆವರಣದಲ್ಲಿ ಜೂನ್ 12ರಂದು ಬೆಳಿಗ್ಗೆ 10.30ಕ್ಕೆ ಪ್ರದರ್ಶನ ಮತ್ತು ಮಾರಾಟದ ಉದ್ಘಾಟನೆಯಾಗಲಿದೆ. ಈಶ್ವರಿ ವಿದ್ಯಾಲಯದ ಬ್ರಹ್ಮಕುಮಾರಿ, ಅನುಸೂಯ ಅಕ್ಕ ಅವರು, ಸಾನಿಧ್ಯವಹಿಸಲಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆರ್ಎಸ್ಎಸ್ ಪ್ರಮುಖರಾದ ಪಟ್ಟಾಭಿರಾಮ್, ಉದ್ಯಮಿ ಎಸ್. ರುದ್ರೇಗೌಡ, ಎಪಿಎಂಸಿ ಕಾರ್ಯದರ್ಶಿ ಹೆಚ್.ವೈ. ಸತೀಶ್, ಸಂಸ್ಥೆಯ ಮುಖ್ಯಸ್ಥ ಡಿ. ಮಲ್ಕಪ್ಪ ಮುಂತಾದವರು ಉಪಸ್ಥಿತರಿರುವರು. ಹಣ್ಣುಗಳ ಪ್ರಿಯರು ಒಂದೇ ಸೂರಿನಡಿ ಮಾರಾಟಕ್ಕೆ ಮತ್ತು ನೋಡಲು ಸಿಗುತ್ತಿರುವುದು ಅಪರೂಪವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಹರ್ಷಾಕಾಮತ್, ಡಿ.ಎಂ. ಶಂಕರಪ್ಪ, ಹೆಚ್.ಸಿ. ಗಣೇಶ್, ಮಂಜುನಾಥ್ ಎಂ. ಅನೀಲ್ ಮುಂತಾದವರಿದ್ದರು.
