
ಶಿವಮೊಗ್ಗ :- ವಾಲ್ಮೀಕಿ ಸಮುದಾಯದ ದಕ್ಷ, ಪ್ರಾಮಾಣಿಕ ಅಧಿಕಾರಿಯಾದ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ರಾಜ್ಯ ವಾಲ್ಮೀಕಿ ನಾಯಕ ಯುವಪಡೆ, ಶಿವಮೊಗ್ಗ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭ್ರಷ್ಟ ಕಾಂಗ್ರೆಸ್ ಸರ್ಕಾರವು ವಾಲ್ಮೀಕಿ ಸಮುದಾಯದ ದಕ್ಷ ಅಧಿಕಾರಿಯಾದ ದಯಾನಂದ್ ಮತ್ತು ಇತರ ಅನೇಕ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯವಾಗಿದೆ. ಸರ್ಕಾರವು ತನ್ನ ತಪ್ಪನ್ನು ಮುಚ್ಚಿಹಾಕುವ ಕುತಂತ್ರದಿಂದ ದಕ್ಷ ಅಧಿಕಾರಿಗಳನ್ನು ಅಮಾನತು ಮಾಡಿದೆ. ರಾಜ್ಯದ ಜನರ ಮನಸ್ಸಿನಲ್ಲಿ ಭುಗಿಲೆದ್ದ ಆಕ್ರೋಶವನ್ನು ತಣಿಸಲು ಇಂತಹ ನಾಟಕೀಯ ನಡೆ ಸರಿಯಾದ ಕ್ರಮವಲ್ಲ, ಈ ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ವಾಲ್ಮೀಕಿ ಸಮುದಾಯ ಸಂಘಟನೆಗಳು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿಯಾಗುತ್ತದೆ. ಈ ಕೂಡಲೇ ಎಚ್ಚೆತ್ತುಕೊಂಡು ಸರ್ಕಾರ ಅಮಾನತು ಆದೇಶವನ್ನು ಹಿಂಪಡೆಯಬೇಕೆಂದು ವಾಲ್ಮೀಕಿ ಯುವಪಡೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಹರೀಶ್, ಪ್ರಮುಖರಾದ ಆರ್. ಲಕ್ಷ್ಮಣ್, ಮೇಘರಾಜ್, ಮಂಜಪ್ಪ, ಬೀರನಕೆರೆ ಗಣೇಶ್, ಗಸ್ತಿ, ರಾಜು, ವರುಣ್, ಹನುಮಂತಪ್ಪ, ನಾಗರಾಜ್, ಭೀಮಪ್ಪ ಮೊದಲಾದವರಿದ್ದರು.
