google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ತುಂಗಭದ್ರಾ ನದಿಯುದ್ದಕ್ಕೂ ಎಲ್ಲಿಯೂ ಚರಂಡಿ ನೀರನ್ನು ಶುದ್ಧೀಕರಣಗೊಳಿಸುವ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು, ಇದು ಭೀಕರ ದುರಂತ. ಅಲ್ಲದೆ ತುಂಗಭದ್ರೆ ಸಮಸ್ಯೆಗಳ ಗೂಡಾಗಿರುವುದು ಕಂಡು ಬಂದಿದೆ ಎಂದು ಪರಿಸರ ತಜ್ಞ ಡಾ.ಬಿ.ಎಂ.ಕುಮಾರ ಸ್ವಾಮಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ ಇವರ ಆಶ್ರಯದಲ್ಲಿ ಇತ್ತೀಚೆಗೆ ಚಿಕ್ಕಮಗಳೂರಿನ ಶೃಂಗೇರಿಯಿಂದ ಕೊಪ್ಪಳದ ಕಿಷ್ಕಿಂದೆ (ಗಂಗಾವತಿ)ವರೆಗೆ 430 ಕಿ.ಮೀ. ಉದ್ದದ ತುಂಗಭದ್ರಾ ನದಿ ನೀರಿನ ಸ್ವಚ್ಛತೆ ಬಗ್ಗೆ ಜನಜಗೃತಿ-ಜಲಜಗೃತಿ ಕುರಿತು ಬೃಹತ್ ನಿರ್ಮಲ ತುಂಗಾ ಅಭಿಯಾನ, ಕರ್ನಾಟಕದಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ಕಂಡುಬಂದ ಸಮಸ್ಯೆ, ಸಾರ್ವಜನಿಕರಿಂದ ಬಂದ ಅಭಿಪ್ರಾಯಗಳನ್ನು ಕ್ರ್ಢೂಕರಿಸಿ ಸಿದ್ಧಪಡಿಸಿದ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ತುಂಗಭದ್ರಾ ನದಿಯು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ,. ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜೀವನದಿಯಾಗಿದ್ದು, ಈ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಹೇರಳವಾಗಿ ಕಂಡು ಬಂದಿದ್ದು, ಯಾವುದೇ ಉಪಯೋಗಕ್ಕಕೆ ಭಾರದಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಅರಣ್ಯನಾಶವಾಗಿದ್ದು, ಪ್ರವಾಹ ಬಂದಾಗ ನೀರು ಉಕ್ಕಿ ಹರಿದರೂ ತದನಂತರ ನೀರಿನ ಧಾರಣಾ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಮಳೆಗಾಲದಲ್ಲಿ ಅರಣ್ಯದಲ್ಲಿ ಬೀಳುವ ಮಳೆಯಿಂದಾಗಿ ಅಲ್ಲಿನ ಮಣ್ಣು ನದಿಗೆ ಸೇರುವುದರ ಮೂಲಕವೂ ಅಲ್ಯೂಮಿನಿಯಂ ಅಂಶ ಹೆಚ್ಚಾಗುತ್ತಿದೆ ಎಂದರು.

ಶೃಂಗೇರಿಯಿಂದ ಹರಿಹರದವರೆಗಿನ ಪ್ರದೇಶ ಕೃಷಿಪ್ರಧಾನವಾಗಿದ್ದು, ಇಲ್ಲಿ ಬಳಸುವ ರಾಸಾಯನಿಕ ಗೊಬ್ಬರ, ಕೀಟನಾಶಕ ಇತ್ಯಾದಿಗಳು ನೇರವಾಗಿ ನದಿಯನ್ನು ಸೇರುತ್ತಿವೆ. ಹರಿಹರದಿಂದ ಗಂಗಾವತಿವರೆಗಿನ ಪ್ರದೇಶಗಳಲ್ಲಿ ನದಿ ತಟದಲ್ಲಿರುವ ಆದಿತ್ಯ ಬಿರ್ಲಾದಂತಹ ಬೃಹತ್ ಕೈಗಾರಿಕೆಗಳ ತ್ಯಾಜ್ಯ ನದಿಯನ್ನು ಸೇರಿ, ಸಂಪೂರ್ಣ ಕಲುಷಿತಗೊಳಿಸಿವೆ. ಇದರಿಂದ ನದಿನೀರು ಬಾಹ್ಯ ಉಪಯೋಗಕ್ಕೂ ಬಾರದು ಎಂದು ವೈಜನಿಕ ಸಂಶೋಧನಾವರದಿ ತಿಳಿಸಿದೆ ಎಂದರಲ್ಲದೆ, ವರದಿಯಲ್ಲಿನ ಅನೇಕ ಅಂಶಗಳು ಜೀವರಾಶಿಗಳು ಹಾಗೂ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸರ್ಕಾರ ಶೀಘ್ರ ಗಮನಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.

ತಾವು ನಡೆಸಿದ ಪಾದಯಾತ್ರೆಯು ನದಿಪಾತ್ರದ ಏಳು ಜಿಲ್ಲೆಗಳು, 13 ತಾಲ್ಲೂಕುಗಳು ಹಾಗೂ 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಎರಡು ಹಂತಗಳಲ್ಲಿ ಸಾಗಿ, ಒಟ್ಟು 22 ದಿನಗಳಲ್ಲಿ ಸುಮಾರು 430 ಕಿ.ಮೀ. ಕ್ರಮಿಸಿ, ಜಲಸಂರಕ್ಷಣೆ ಕಾರ್ಯದಲ್ಲಿ ದಾಖಲೆಯನ್ನು ಬರೆದಿದೆ ಎಂದರು.
ಈ ಪಾದಯಾತ್ರೆಯಲ್ಲಿ ಸುಮಾರು ೩೫ ಸಣ್ಣ, ೧೫ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸಿ, ಜನರಲ್ಲಿ ಜಲಜಗೃತಿವುಂಟುಮಾಡುವ ಜೊತೆಗೆ ನದಿ ಸಂರಕ್ಷಣೆ ಕಾರ್ಯದ ಬಗ್ಗೆ ಸರ್ಕಾರದ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದ ಅವರು, ಈ ಪಾದಯಾತ್ರೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ೨೫೦ ಪರಿಸರ ಕಾಳಜಿ ಸಂಘ-ಸಂಸ್ಥೆಗಳು, ೩೦ ಧಾರ್ಮಿಕ ಮಠ-ಮಂದಿರಗಳು, ರೈತರು, ಸಾಧುಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ ಎಂದರು.

ಇನ್ನೋರ್ವ ಪರಿಸರ ತಜ್ಞ ಪ್ರೊ.ಎಲ್.ಕೆ. ಶ್ರೀಪತಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಸಂಸ್ಥೆಯಿಂದಲೇ ಪ್ರಕಟವಾದ ವರದಿಯಲ್ಲಿ ಈ ನದಿ ನೀರಿನಲ್ಲಿ ಅಲ್ಯೂಮಿನಿಯಂ ಅಂಶ ಹೇರಳವಾಗಿದ್ದುದು ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಈ ನೀರಿನ ಸೇವನೆಯಿಂದ ಮೂಳೆಸಾಂಧ್ರತೆ ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ಅಲ್ಯೂಮಿನಿಯಂ ಅಂಶದ ಬಗ್ಗೆ ಇನ್ನಷ್ಟು ಪರೀಕ್ಷೆಯಾಗಬೇಕು. ಕೊಪ್ಪಳದ ಉಳೇನೂರಿನಲ್ಲಿ ಇಕೋಲೈ ಅಂಶ ಕಂಡು ಬಂದಿದ್ದು, ಜನುವಾರುಗಳು ಇದನ್ನು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಆಘಾತಕಾರಿಯಾಗಿದೆ. ನೀರಿನಲ್ಲಿ ಆಕ್ಸಿಜನ್ ಕೊರತೆಯು ಹೆಚ್ಚಿದೆ. ಕೃಷಿ, ಜನವಸತಿ, ಕೈಗಾರಿಕೆ, ಸುಧಾರಣೆಯಾಗದಿದ್ದರೆ ನಾವು ನದಿಯನ್ನು ಕಳೆದುಕೊಳ್ಳುತ್ತೇವೆ. ಮುಂದೊಂದು ದಿನ ಈ ನದಿ ಬೆಂಗಳೂರಿನ ವೃಷಭಾವತಿ ನದಿಯಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತೀ ತಾಲ್ಲೂಕಿನಲ್ಲೂ ಜಲಜಗೃತಿ ಸಮಿತಿ ರಚಿಸಿ, ಅವುಗಳಿಗೆ ತಾಂತ್ರಿಕ ಸಹಾಯ ನೀಡಲು ಯೋಜನೆ ರೂಪಿಸಿದ್ದೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪರ್ಯಾವರಣ ಟ್ರಸ್ಟಿನ ಗಿರೀಶ್ ಪಟೇಲ್, ಎಂ. ಶಂಕರ್, ರಮೇಶ್ ಹೆಗ್ಡೆ, ದಿನೇಶ್ ಎಸ್.ಪಿ., ಕಿರಣ್ ಕೆ., ಬಾಲಕೃಷ್ಣ ನಾಯ್ಡು, ತ್ಯಾಗರಾಜ್ ಮಿತ್ಯಾಂತ ಇದ್ದರು.

Leave a Reply

Your email address will not be published. Required fields are marked *