
ಶಿವಮೊಗ್ಗ: ಸ್ಪರ್ಧಾತ್ಮಕ ಮನಸ್ಸು ಮನುಷ್ಯನ ಬದುಕಿನ ಉನ್ನತಿಗೆ ಬಹುದೊಡ್ಡ ಅಸ್ತ್ರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಸಂಜೆ ಅನನ್ಯ ಮಂಟಪದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಎಂಜಿನಿಯರಿಂಗ್ ಅಂತರ ಕಾಲೇಜುಗಳ ತಾಂತ್ರಿಕ ಸ್ಪರ್ಧೆ ‘ಟೆಕ್ ಜೋನ್’ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಜಗತ್ತು ತಾಂತ್ರಿಕತೆಯ ಅದ್ಭುತ ಸಾಧನೆಗಳನ್ನು ಮಾಡುತ್ತಿದೆ. ಅಂತಹ ಸಾಧನೆಗಳ ಸಾಧಕರ ಪಟ್ಟಿಯಲ್ಲಿ ಯುವ ಸಮೂಹ ಅದ್ವಿತೀಯ ಸ್ಥಾನ ಪಡೆದಿದ್ದಾರೆ. ನಮ್ಮ ಚಿಂತನೆಗಳು ಸಮಾಜಮುಖಿ ಆಗಬೇಕಿದೆ. ನಮ್ಮ ದೇಶ, ಓದಿದ ವಿದ್ಯಾಸಂಸ್ಥೆ ಎಲ್ಲವನ್ನೂ ಪ್ರೀತಿಯಿಂದ ಗೌರವಿಸಬೇಕಿದೆ. ಆಗ ಮಾತ್ರ ನಮ್ಮ ನಾವೀನ್ಯಯುತ ಪ್ರಯತ್ನಗಳು ಸಮಾಜವನ್ನು ತಲುಪಲಿದೆ ಎಂದು ಹೇಳಿದರು.
ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್ ಮಾತನಾಡಿ, ಯುವ ಸಮೂಹದಲ್ಲಿರುವ ತಾಂತ್ರಿಕ ಕೌಶಲ್ಯತೆಗಳು ನಮ್ಮ ಸೇನಾ ವ್ಯವಸ್ಥೆಯನ್ನು ಮತ್ತಷ್ಟು ಬಲ ಪಡಿಸುವಂತಾಗಲಿ. ಪದವೀಧರರಾಗಿ ಹೊರಹೊಮ್ಮುವ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಸದಾ ಮಾದರಿಯಾಗಿ ಇರಬೇಕು. ಉನ್ನತ ಸಂಶೋಧನಾ ಕೌಶಲ್ಯತೆಗಳು, ನಾವೀನ್ಯಯುತ ಚಿಂತನೆಗಳು ನಿಮ್ಮದಾಗಲಿ ಎಂದು ಆಶಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಆಜೀವ ಸದಸ್ಯ ರಾಮಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಈ.ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಜಾನ್ವಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
