
ಶಿವಮೊಗ್ಗ :- ಜಿಲ್ಲೆಯ ಎಲ್ಲ ಬ್ಯಾಂಕುಗಳಲ್ಲಿ ಸಿಸಿಟಿವಿ, ಎಚ್ಚರಿಕೆ ಗಂಟೆಗಳ ಅಳವಡಿಕೆ, ಭದ್ರತಾ ಸಿಬ್ಬಂದಿ ನಿಯೋಜನೆ, ಪೊಲೀಸ್ ಗಸ್ತು ಸೇರಿದಂತೆ ಅಗತ್ಯವಾದ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಜಿಲ್ಲೆಯ ಬ್ಯಾಂಕುಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸುರಕ್ಷತಾ ಸಮಿತಿ (ಡಿಎಲ್‌ಎಸ್‌ಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೩೫೮ ಬ್ಯಾಂಕುಗಳು, ೪೩೫ ಎಟಿಎಂ ಗಳು, ೫ ಕರೆನ್ಸಿ ಚೆಸ್ಟ್‌ಗಳು ಇದ್ದು, ಆರ್‌ಬಿಐ ಮಾರ್ಗಸೂಚಿಯನ್ವಯ ಬ್ಯಾಂಕುಗಳಲ್ಲಿ ಹಾಗೂ ಕರೆನ್ಸಿ ಚೆಸ್ಟ್‌ಗಳಲ್ಲಿ ಸಿಸಿಟಿವಿ, ಸೈರನ್, ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಬೇಕು ಹಾಗೂ ಅವುಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಎಚ್ಚರಿಕೆ ಗಂಟೆ ಮತ್ತು ಇತರೆ ಸುರಕ್ಷತಾ ಕ್ರಮಗಳೊಂದಿಗೆ ಸ್ಟ್ರಾಂಗ್ ಕೊಠಡಿ ನಿರ್ವಹಣೆ ಮಾಡಬೇಕು. ಕರನ್ಸಿ Zಸ್ಟ್‌ಗಳಿಂದ ಹಣ ವರ್ಗಾವಣೆ ವೇಳೆ ಅಗತ್ಯ ಸುರಕ್ಷತಾ ಕ್ರಮಗಳಾದ ಪೊಲೀಸ್ ನಿಯೋಜನೆ ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದ್ದ್ಟಾರೆ.
ಎಟಿಎಂ ಗಳಲ್ಲಿ ಸಿಸಿ ಟಿವಿ ಅಳವಡಿಕೆ, ಸೈರನ್ ಮತ್ತು ಬೆಂಕಿ ನಂದಿಸುವ ಸಾಧನಗಳನ್ನು ಅಳವಡಿಸಿ, ಅವು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ನಿರ್ದಿಷ್ಟಪಡಿಸಿದ ರೀತಿಯಲ್ಲಿ ಎಟಿಎಂ ರೂಂ ಗಳು ಇರಬೇಕು. ಅಧಿಕೃತ ವ್ಯಕ್ತಿಗಳ ಎದುರು ನಗದನ್ನು ಲೋಡ್ ಮತ್ತು ಅನ್‌ಲೋಡ್ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಬ್ಯಾಂಕುಗಳ ಜವಾಬ್ದಾರಿಯುತ ವ್ಯಕ್ತಿಗಳ ಸಂಪರ್ಕದ ವಿವರವನ್ನು ನೀಡಿರಬೇಕು. ಗ್ರಾಹಕರು ವಂಚನೆಗೊಳಗಾಗದಂತೆ ಮಾಹಿತಿ ನೀಡುವಂತಹ ಫಲಕಗಳನ್ನು ಎಟಿಎಂ ಒಳಗೆ ಹಾಕಿರಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕುಗಳ ಭದ್ರತಾ ಸಿಬ್ಬಂದಿಗಳು ಮತ್ತು ನಗದು ಬೆಂಗಾವಲು ಕರ್ತವ್ಯನಿರತ ಸಿಬ್ಬಂದಿಗಳ ಗನ್ ಪರವಾನಗಿ ನವೀಕರಣ ಖಾತ್ರಿಪಡಿಸಿಕೊಳ್ಳಬೇಕು. ಭದ್ರತಾ ಸಿಬ್ಬಂದಿಗಳಿಗೆ ಸಮರ್ಪಕ ತರಬೇತಿ ನೀಡಿರಬೇಕು. ನಗದು ವರ್ಗಾವಣೆ ವೇಳೆ ಭದ್ರತಾ ಸಿಬ್ಬಂದಿ ಕೊರತೆ ಇದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದ ಅವರು ಗನ್ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಸೈಬರ್ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, ಸೈಬರ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಲು ಬ್ಯಾಂಕುಗಳಲ್ಲಿ ಸಂತ್ರಸ್ತರ ಕೆವೈಸಿ ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ನ್ನು ಕೇಳಲಾಗುತ್ತದೆ. ಆ ವೇಳೆ ಬ್ಯಾಂಕುಗಳಿಂದ ತಕ್ಷಣಕ್ಕೆ ಸಹಕಾರ ಸಿಗದೆ ವಿಳಂಬವಾಗುತ್ತಿರುವುದಕ್ಕೆ ಅನೇಕ ವೇಳೆ ಸಂತ್ರಸ್ತರನ್ನು ನಷ್ಟದಿಂದ ರಕ್ಷಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಬ್ಯಾಂಕುಗಳು ಕ್ಷಿಪ್ರಗತಿಯಲ್ಲಿ ಸಹಕರಿಸಬೇಕು ಹಾಗೂ ಕೋರ್ಟ್ ಆದೇಶವಾದ ಪ್ರಕರಣಗಳಲ್ಲಿ ತಕ್ಷಣಕ್ಕೆ ಕ್ರಮ ವಹಿಸಬೇಕೆಂದು ಕೋರಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ್, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.
