
ಶಿವಮೊಗ್ಗ :- ಕಳೆದೊಂದು ತಿಂಗಳಿನಿಂದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದ್ದು, ಹೇಳುವವರು, ಕೇಳುವವರಿಲ್ಲದೆ ಲಕ್ಷಾಂತರ ಲೀಟರ್ ಕುಡಿಯುವ ನೀರು ಸೋರಿಕೆಯಾಗುತ್ತಿದೆ.

ರಾಜೇಂದ್ರ ನಗರದ ರೈಲ್ವೆ ಟ್ರ್ಯಾಕ್ ಮತ್ತು ಪಾರ್ಕ್ ಮಧ್ಯದಲ್ಲಿ ಇರುವ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ನಲ್ಲಿ ಅತೀ ಹೆಚ್ಚು ನೀರು ಸೋರಿಕೆಯಾಗುತ್ತ್ತಿದೆ. ಸರಿಯಾಗಿ ದುರಸ್ಥಿಯಾಗದ ಕಾರಣ ಕಳೆದೊಂದು ತಿಂಗಳ ಹಿಂದೆ ಪೈಪ್ ಒಡೆದು ಕುಡಿಯುವ ನೀರು ಚರಂಡಿ ನೀರನ್ನು ಸೇರಿ ಪೋಲಾಗುತ್ತಲೇ ಇದೆ ಇದಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳ ಗಮನಕ್ಕೂ vಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರಿಯಾಗಿ ಗಮನಹರಿಸದೇ ಲಕ್ಷಾಂತರ ಲೀಟರ್ ನೀರು ಪ್ರತಿನಿತ್ಯ ಮೋರಿ ಪಾಲಾಗುತ್ತಿದೆ. ಕೆಲ ಬಡಾವಣೆಗಳಲ್ಲಿ ಇನ್ನೂ ಸರಿಯಾಗಿ ನೀರು ಸರಬರಾಜಾಗದೆ. ಪರಿತಪಿಸುತ್ತಿದ್ದಾರೆ. ಆದರೆ ಇಲ್ಲಿ ಅನಗತ್ಯ ಕುಡಿಯುವ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಇದುವರೆಗೂ ಸರಿಪಡಿಸಲು ಮುಂದೆ ಬಾರದಿರುವುದನ್ನು ನೋಡಿದರೆ ಇವರಿಗೆ ಜನಹಿತದ ಬಗ್ಗೆ ಕಾಳಜಿ ಇಲ್ಲ ಎಂಬುದು ಅರಿವಿಗೆ ಬರುತ್ತದೆ. ಜೊತೆಗೆ ಕುಡಿಯುವ ನೀರು ಸರಬರಾಜು ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದೆ. ಕಳೆದ ಸುಮಾರು ದಿನಗಳಿಂದ ಹೆಚ್ಚು ಜನ ಸೇರದ ಈ ಜಾಗದಲ್ಲಿ ಪೈಪ್ ಒಡೆದು ಹೋಗಿದ್ದು ಧಾರಾಕಾರವಾಗಿ ಸುಮಾರು ಐದು ಇಂಚಿನಷ್ಟು ನೀರು ಹರಿದು ಹೋಗುತ್ತಿದೆ. ಇದನ್ನು ಗಮನಿಸಲು ದೂರು ನೀಡಿದರೂ ನಿರ್ಲಕ್ಷ್ಯದಿಂದ ಇರುವ ಇಲಾಖೆಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದ್ದಾರೆ.
ಇಲ್ಲಿ ಇನ್ನೂ ಕೂಡ ಕೆಲ ಮನೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರೆ ಸಿಗುತ್ತಿಲ್ಲ. ಕೂಡಲೆ ಪೈಪ್‌ಲೈನ್‌ನ್ನು ಸರಿಪಡಿಸಿ, ಮುಂದೆ ಈ ರೀತಿ ಆಗದಂತೆ ಸೂಕ್ತ ಕ್ರಮ ಕೈಗೊಂಡು ಈ ಭಾಗದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ರಾಷ್ಟ್ರಭಕ್ತ ಬಳಗದ ಮುಖಂಡ ಹಾಗೂ ಸಮಾಜಸೇವಕ ಶ್ರೀಕಾಂತ್ ಒತ್ತಾಯಿಸಿದ್ದಾರೆ.