
ಶಿವಮೊಗ್ಗ :- ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ (ನರೇಗಾ) ಯ ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿಲ್ಲ. ಅದರ ಬದಲು ಯೋಜನೆಯನ್ನೇ ರದ್ದುಪಡಿಸಲಾಗಿದೆ ಈ ಕರಾಳ ಮಸೂದೆ ವಿರುದ್ಧ ಗ್ರಾ.ಪಂ. ಮಟ್ಟದಿಂದ ಕಾಂಗ್ರೆಸ್ ಹೋರಾಟವನ್ನು ಕೈಗೆತ್ತಿಕೊಳ್ಳುತ್ತದೆ ಎಂದು ಸಚಿವ ಮಧುಬಂಗಾರಪ್ಪಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಜೆಪಿ ಪ್ರತಿಯೊಂದು ಹಂತದಲ್ಲೂ ಗಾಂಧೀಜಿಯವರ ಹೆಸರನ್ನೇ ನಾಶಮಾಡಲು ಹೊರಟಿದೆ. ಹೇ ರಾಮ್ ಎಂದು ಹೇಳಿದ್ದ ಗಾಂಧೀಜಿಯವರನ್ನೇ ನಾಶಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದರು.
ಉದ್ಯೋಗಖಾತ್ರಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಉದ್ಯೋಗದಾತರಿಗೆ ಕೆಲಸವನ್ನು ನೀಡಿತ್ತು. ಬಡವರಿಗೆ ಶ್ರಮಿಕರಿಗೆ ಉದ್ಯೋಗ ನೀಡಿತ್ತು. ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿತ್ತು. ಇದೊಂದು ಅದ್ಬುತವಾದ ಯೋಜನೆಯಾಗಿತ್ತು. ಈಗ ಈ ಯೋಜನೆಯನ್ನೇ ರದ್ದುಪಡಿಸಿ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದೀಗ ಗ್ರಾ.ಪಂ. ಕಾಮಗಾರಿಗಳು ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ಅವಲಂಭಿತವಾಗಲಿದೆ. ಕೇಂದ್ರ ಸರ್ಕಾರದಿಂದ ಅಧಿಸೂಚಿಸಲ್ಪಟ್ಟ ಗ್ರಾಮಗಳಲ್ಲಿನ ಕಾರ್ಮಿಕರು ಮಾತ್ರ ಇದರ ಲಾಭ ಪಡೆಯುತ್ತಾರೆ. ಅಧಿಸೂಚನೆಯಿಂದ ಹೊರಗುಳಿದ ಗ್ರಾಮಗಳ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗುತ್ತಾರೆ. ಎಲ್ಲಾ ದಿನಗಳಲ್ಲೂ ಕೆಲಸ ಸಿಗುವುದಿಲ್ಲ. ಅಲ್ಲದೆ ಕೂಲಿಗೆ ಕಾತರಿಯೂ ಇಲ್ಲ. ಇದು ಕೇವಲ ಕೇಂದ್ರ ಸರ್ಕಾರ ಪಂಚಾಯ್ತಿಗಳಿಗೆ ನೀಡುವ ಅನುದಾನದ ಮೇಲೆ ನಿರ್ಧಾರವಾಗುತ್ತದೆ ಎಂದು ಆರೋಪಿಸಿದರು.
ವಿಕಸಿತ ಭಾರತ್ ಜಿ ರಾಮ್‌ಜೀ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ನರೇಗಾ ಯೋಜನೆಯನ್ನೇ ಮುಂದುವರಿಸಬೇಕು. ಜನರ ಉದ್ಯೋಗದ ಹಕ್ಕನ್ನು ಪುನರ್‌ಸ್ಥಾಪಿಸಬೇಕು. ಗ್ರಾ.ಪಂ.ಗಳನ್ನು ಗಟ್ಟಿಗೊಳಿಸಬೇಕು. ಮಾನವ ದಿನಗಳನ್ನು ೧೫೦ ದಿನಗಳಿಗೆ ಹೆಚ್ಚಿಸಬೇಕು, ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಗ್ರಾಮ ಪಂಚಾಯ್ತಿ ಮಟ್ಟದಿಂದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಕೇರಳದಲ್ಲಿರುವ ಕನ್ನಡ ಶಾಲೆಗಳಲ್ಲಿ ಮಲೆಯಾಳಂ ಭಾಷೆ ಹೇರಿಕೆ ಮಾಡಲಾಗಿದೆ. ಈ ಕುರಿತು ಸರ್ಕಾರದ ಜೊತೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಪಿಯು ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರುಗಳಾದ ಆರ್. ಪ್ರಸನ್ನಕುಮಾರ್, ಚೇತನ್‌ಗೌಡ, ರಮೇಶ್ ಶಂಕರಘಟ್ಟ, ಚಂದ್ರಭೂಪಾಲ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಶರತ್ ಮರಿಯಪ್ಪ, ರವಿಕುಮಾರ್, ದೇವಿಕುಮಾರ್, ಕಲಗೋಡು ರತ್ನಾಕರ್, ಸೈಯದ್ ವಾಹಿದ್ ಅಡ್ಡು, ಚಿನ್ನಪ್ಪ, ಯು. ಶಿವಾನಂದ್ ಉಪಸ್ಥಿತರಿದ್ದರು.