google.com, pub-9939191130407836, DIRECT, f08c47fec0942fa0

ಶಿವಮೊಗ್ಗ: ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಸಂತ ಏಸು ಕ್ರಿಸ್ತರ ಜನ್ಮದಿನವನ್ನು ಗುರುವಾರ ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕ್ರಿಸ್‌ಮಸ್ ಟ್ರೀ, ಏಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿ ನೋಡುಗರ ಗಮನ ಸೆಳೆಯಿತು.
ಬುಧವಾರ ಮಧ್ಯರಾತ್ರಿ ಹಾಗೂ ಗುರುವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. ಚರ್ಚ್‌ಗಳಲ್ಲಿ ಕೇಕ್, ಚಾಕೊಲೆಟ್, ಸಿಹಿ ತಿಂಡಿ ಹಂಚಲಾಯಿತು.

ಮನೆಯಲ್ಲಿ ವಿಶೇಷ ಖಾದ್ಯ ತಯಾರಿಸಿ ಹಬ್ಬದೂಟ ಮಾಡಲಾಯಿತು. ಚರ್ಚ್‌ಗಳಲ್ಲಿ ಶುಭಾಶಯ ಗೀತೆ, ಕ್ರಿಸ್ತರ ಸ್ತುತಿಯ ಗೀತೆ ಸಾಮೂಹಿಕವಾಗಿ ಕೇಳಿಬಂದವು. ವಿವಿಧ ಚರ್ಚ್‌ಗಳಲ್ಲಿ ಅಲ್ಲಿನ ಫಾದರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರಾರ್ಥನೆ ನಡೆಯಿತು.

ಕ್ರಿಸ್ತರ ಜನನದ ಶುಭ ಗಳಿಗೆಯ ಸ್ಮರಣೆಗೆ ಬೆಳಕಿನ ಸಂಕೇತವಾಗಿ ಮೇಣದ ಬತ್ತಿ ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾಕ್ಲಾಸ್ ಸೇರಿ ತರಹೇವಾರಿ ವೇಷ ಧರಿಸಿ ಗಮನ ಸೆಳೆದರು.

ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಪವಿತ್ರ ಹೃದಯ ಪ್ರಧಾನಾಲಯ, ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಬಳಿಯಿರುವ ಸಂತ ಥಾಮಸ್ ಚರ್ಚ್, ಶರಾವತಿ ನಗರದ ಏಸು ಬಾಲರ ಪುಣ್ಯಕ್ಷೇತ್ರ, ಭದ್ರಾವತಿ ನ್ಯೂ ಟೌನ್ ಅಮುಲೋದ್ಭವಿ ಮಾತೆ ದೇವಾಲಯ, 100 ವರ್ಷ ಇತಿಹಾಸವಿರುವ ಸಾಗರದ ಸಂತ ಜೋಸೆಫರ ದೇವಾಲಯ, ತೀರ್ಥಹಳ್ಳಿಯ ಸೇಂಟ್ ಫಿಲೋಮಿನಾ ಚರ್ಚ್, ಲೂಥರ್ ಮಾತೆಯ ಚರ್ಚ್, ಹೊಸನಗದ ಸೇಂಟ್ ಆಂಥೋನಿ ಚರ್ಚ್, ಶಿಕಾರಿಪುರದ ಚರ್ಚ್, ಸೊರಬದ ಸಂತ ಸಬಾಸ್ಟಿಯನ್ ಚರ್ಚ್ ಸೇರಿದಂತೆ ಜಿಲ್ಲೆಯ ಎಲ್ಲ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿದವು.

ಪ್ರಾರ್ಥನೆ: ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಚರ್ಚ್ ಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ವರ್ಣರಂಜಿತ ದೀಪಾಲಾಂಕರದ ವ್ಯವಸ್ಥೆ ಮನಸೂರೆಗೊಂಡಿತು. ಬೆಳಿಗ್ಗೆಯಿಂದಲೇ ಚರ್ಚೆ ಆಗಮಿಸುತ್ತಿದ್ದ ಕ್ರಿಶ್ಚಿಯನ್ ಬಾಂಧವರು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತದನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಬಗೆಗೆಯ ತಿಂಡಿ-ತಿನಿಸು, ಕೇಕ್ ಗಳನ್ನು ಸಿದ್ಧಪಡಿಸಿದ್ದರು. ಬಂಧು- ಬಾಂಧವರು, ನೆರೆಹೊರೆ, ಇತರೆ ಧರ್ಮೀಯರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಹಬ್ಬದ ಭೋಜನ ಸವಿಯುತ್ತಿದ್ದ ದೃಶ್ಯ ಕಂಡುಬಂದಿತು.

Leave a Reply

Your email address will not be published. Required fields are marked *