google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಕೃಷಿ ಭೂಮಿ ಜನತಂತ್ರ ವ್ಯವಸ್ಥೆಯನ್ನು ಉಳಿಸುವಲ್ಲಿ ರೈತ ಚಳುವಳಿಯು ಸಫಲವಾಗಿದೆ ಎಂದು ರೈತ ಹೋರಾಟಗಾರ ಕಂಬಳಿಗೆರೆ ರಾಜೇಂದ್ರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ, ರೈತ ನಾಯಕ ದಿ. ಎನ್. ಡಿ. ಸುಂದರೇಶ್ ಸ್ಮಾರಕ ದತ್ತಿದಾನಿ ಶೋಭಾ ಸುಂದರೇಶ್ ಅವರ ಆಶಯದಂತೆ ರೈತ ಚಳುವಳಿ ಮತ್ತು ಸಾಹಿತ್ಯದಲ್ಲಿ ಕೃಷಿ ಪರಂಪರೆ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಸಮಾಜವಾದಿ ನಾಯಕರ ಪ್ರಭಾವದಿಂದಾಗಿ, ರೈತರ ಮಕ್ಕಳ ಸಮಸ್ಯೆಗಳು ಅರಿವಿಗೆ ಬಂದವು. ರಾಷ್ಟ್ರಕವಿ ಕುವೆಂಪು ಅವರು ರೈತರನ್ನು ಕುರಿತು ಮೊಟ್ಟ ಮೊದಲು ಸಾಹಿತ್ಯ ರಚಿಸಿದರು. ರಾಜರು, ಸಾಮಂತರು, ಪಾಳೇಗಾರರು, ಬ್ರಿಟಿಷ್ ಸರ್ಕಾರ, ನಂತರದ ನಮ್ಮ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಲೆ ಬಂದಿದ್ದಾರೆ.

ಶ್ರೀಮಂತರ ಏಜೆಂಟ್‌ ಗಳು ಸೇರಿ ರೈತರಿಂದ ಭೂಮಿ ಕಿತ್ತುಕೊಂಡರು. ರೈತರನ್ನು ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡಿದರು. ಜೊಳ್ಳು ಸುಳ್ಳು ಹೇಳಿ, ತೂಕದಲ್ಲಿ ಮೋಸ ಮಾಡುತ್ತಿದ್ದರು. ಈ ಎಲ್ಲಾ ಶೋಷಣೆ ವಿರುದ್ದ ರೈತ ಹೋರಾಟಗಾರರಾದ ಎನ್. ಡಿ. ಸುಂದರೇಶ್ ಸೇರಿದಂತೆ ಹಲವು ನಾಯಕರ ಪರಿಶ್ರಮದಿಂದ ದೊಡ್ಡ ಹೋರಾಟ ಕಟ್ಟಲಾಯಿತು.

ಸಾಲ ವಸೂಲಿಗೆ ಬಂದ ಸರ್ಕಾರದ ನೌಕರರು, ಗೃಹಿಣಿಯರ ತಾಳಿ ಸರಕ್ಕೆ ಕೈಹಾಕಿ ಕಿತ್ತುಕೊಂಡು ಹೋಗಿದ್ದರು. ಇದರ ಪರಿಣಾಮ ರೈತ ಹೋರಾಟದ ಮೂಲಕ ಮರು ಜಪ್ತಿ ಆರಂಭಿಸಲಾಯಿತು. ಇಂದಿಗೂ ಈ ದೇಶದ ಆಳುವ ಜನರು, ರೈತನ ಬೆಳೆಗೆ ಸರಿಯಾದ ಸಬ್ಸಿಡಿ ಕೊಡದೆ, ರೈತ ಬೆಳೆದ ತುತ್ತನ್ನು ತಿನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ. ಹೇಮ್ಲಾನಾಯಕ್ ಮಾತನಾಡಿ, ರೈತ ಮಕ್ಕಳಾದ ನಾವೆಲ್ಲರೂ ರೈತ ಹೋರಾಟದ ಪರಂಪರೆ ಅರಿಯಬೇಕು. ರೈತರ ಏಳಿಗೆಗಾಗಿ ಹಾಗೂ ಅವರ ಹಿತ ಚಿಂತನೆ ಮಾಡುವಲ್ಲಿ,  ಕೃಷಿ ವಿ.ವಿ. ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಬಿ. ಚಂದ್ರೇಗೌಡರು, ವಕೀಲರಾದ ಆರ್. ಎಂ. ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊರಬೈಲು ರಾಮಕೃಷ್ಣ, ಡಿ. ಗಣೇಶ್, ಎಂ. ನವೀನ್ ಕುಮಾರ್, ಶಿಕಾರಿಪುರ ಮಂಜಪ್ಪ ನವರು ಉಪಸ್ಥಿತರಿದ್ದರು. ಕೃಷಿ ವಿ.ವಿ. ಆವರಣದ ಮುಖ್ಯಸ್ಥರಾದ ಡೀನ್ ಡಾ. ಬಿ. ತಿಪ್ಪೇಶ್ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಶಿವಪುತ್ರ ಬೊಮ್ಮನಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *