ಶಿವಮೊಗ್ಗ: ಯಾವುದೇ ಕೆಲಸ ಮಾಡಲು ಶ್ರದ್ಧೆ ಇರಬೇಕು. ಸ್ವಾಮಿ ವಿವೇಕಾನಂದರು ತಿಳಿಸಿರುವ ಹಾಗೆ ಶ್ರದ್ಧೆ ಇದ್ದರೆ ಗೆದ್ದೆ ಎಂಬ ಮಾತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸಂಸದ ಬಿ. ವೈ. ರಾಘವೇಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಜ್ಞಾನ ಪರಿಷತ್, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜು ಒಂದು ಇತಿಹಾಸವುಳ್ಳ ಕಾಲೇಜು ಈ ಕಾಲೇಜಿನಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ವಿಜ್ಞಾನಿಗಳು, ಕವಿಗಳು,ಹಾಗೂ ರಾಜಕಾರಣಿಗಳನ್ನು ನಾವು ಕಾಣಬಹುದು. ಯಾವುದೇ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪಕರು ಇದ್ದರೆ ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೈಯಲು ಸಹಕಾರಿ ಎನ್ನುವ ಹಾಗೆ ಈ ಕಾಲೇಜಿನಲ್ಲಿ ಗುಣಮಟ್ಟದ ಆಧ್ಯಾಪಕ ವೃಂದವನ್ನು ನಾವು ಕಾಣಬಹುದುದಾಗಿದೆ ಎಂದರು.
ಜಪಾನ್ ದೇಶದಲ್ಲಿ ಶಿಸ್ತು ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ನಮ್ಮ ದೇಶದಲ್ಲಿಯೂ ಸಹ ಗುಣಮಟ್ಟದ ಶಿಕ್ಷಣ ಹಾಗೂ ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಮೂಲಕ ದೇಶದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಜ್ಞಾನ ಆಸಕ್ತರಿಗೆ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಇದರ ಸದುಪಯೋಗವನ್ನು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿ ಕುಲಪತಿಗಳಿಗೆ ಹಾಗೂ ಕುಲ ಸಚಿವರಿಗೆ ಕೇಂದ್ರದಿಂದ ನೆರವು ಬೇಕಾದಲ್ಲಿ ಖಂಡಿತಾ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ತಿಳಿಸಿದರು.
ಕುವೆಂಪು ವಿ.ವಿಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ’ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿ ನಿಮಗೆ ಬೇಕಾದ ನೆರವು ನಾವು ನೀಡುತ್ತೇವೆ ಎಂದು ತಿಳಿಸಿದರು.
ಕುಲಸಚಿವರಾದ ಮಂಜುನಾಥ್ ಎ.ಎಲ್ ಮಾತನಾಡಿ, ಈ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯವರು ಗ್ರಾಮೀಣ ಭಾಗದವರಾಗಿದ್ದು ಈ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಮಾನ್ಯ ಸಂಸದರು ಸಹಕರಿಸಬೇಕಾಗಿ ಕೇಳಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ರೋಹನ್ ಡಿಕಾಸ್ಟ, ದೈಹಿಕ ಶಿಕ್ಷಣ ನಿರ್ದೇಶಕರು, ಆಯನೂರು ಮಾತನಾಡಿ ಕ್ರೀಡೆಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಸವಲತ್ತುಗಳು ಮತ್ತು ಅವಕಾಶಗಳನ್ನು ವಿವರಿಸಿ ತಿಳಿಸಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಭಾಗ್ಯಶ್ರೀ ಗೌಡ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೃಷ್ಣಮೂರ್ತಿ, ಡಾ.ಪ್ರಭಾಕರ್ ಚವಾಣ್, ಡಾ. ವಿದ್ಯಾಶಂಕರ್, ಡಾ.ಯುವರಾಜ್, ವಿದ್ಯಾರ್ಥಿ ಪ್ರತಿನಿಧಿಗಳಾದ ಖುಷಿ, ಗೋಪಿ, ವೇದಿಕೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ .ರಾಜೇಶ್ವರಿ ಎನ್ ಅವರು ವಹಿಸಿಕೊಂಡಿದ್ದರು. ಪ್ರಸ್ತಾವಿಕವಾಗಿ ಡಾ. ನಾಗರಾಜ್ ಎನ್ ಮಾತನಾಡಿದರು, ಕುಮಾರಿ ನಿವೇದಿತಾ ಎಲ್ಲರನ್ನೂ ಸ್ವಾಗತಿಸಿದರು. ಡಾ. ನಾಗರಾಜ ಪರಿಸರ ಎಲ್ಲರನ್ನೂ ವಂದಿಸಿದರು. ಕುಮಾರಿ ಶಾಂಭವಿ ಹಾಗೂ ಅರ್ಪಿತ ನಿರೂಪಣೆ ಮಾಡಿದರು.