google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಬಿ.ಹೆಚ್. ರಸ್ತೆಯಲ್ಲಿನ ವಿಷ್ಣು ಭವನದ ಎದುರು ಫುಟ್‌ಪಾತ್ ಮೇಲೆ ಎರಡು ಬೆಳೆದು ನಿಂತಿದ್ದ ಬಾದಾಮ್ ಮರಗಳನ್ನು ಯಾರೋ ದುಷ್ಕರ್ಮಿಗಳು ಮಂಗಳವಾರ ಬೆಳಗಿನ ಜಾವ ಮರದ ಬುಡಕ್ಕೇ ಗರಗಸ ಹಚ್ಚಿ ಧರೆಗುರುಳಿಸಿದ್ದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಕಡಿತಲೆ ಆಗಿದ್ದನ್ನು ವಿರೋಧಿಸಿ ಇಂದು ಬೆಳಿಗ್ಗೆ ಪರಿಸರ ಪ್ರಿಯರು ಘಟನಾ ಸ್ಥಳದಲ್ಲೇ ಪ್ರತಿಭಟನಾ ಧರಣಿ ನಡೆಸಿದರು.

ಧರಣಿ ನಿರತ ಪರಿಸರಪ್ರಿಯ ಪ್ರಮುಖರು ಮಾತನಾಡಿ, ನಗರದಲ್ಲಿ ಈ ರೀತಿಯ ಮರಕಡಿತಲೆ ದುಷ್ಕೃತ್ಯ ಅವ್ಯಾಹತವಾಗಿ ನಡೆದಿದೆ. ಅಂಗಡಿ ಮುಂಗಟ್ಟುಗಳಿಗೆ ಮರೆಯಾಗಿ ಸಾರ್ವಜನಿಕರಿಗೆ ಕಾಣುತ್ತಿಲ್ಲವೆಂದೋ, ಮನೆಯ ಎದುರು ಇರುವ ಮರದ ಎಲೆಗಳು ಕಸ ಹರಡುತ್ತದೆ ಎಂತಲೋ ಹೀಗೆ ಅನೇಕ ಕಾರಣಗಳಿಂದ ಮರಗಳ ಮಾರಣ ಹೋಮ ನಡೆಯುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ರಸ್ತೆ ಬದಿಯಲ್ಲಿರುವ ಮರಗಳಿಗೆ ತೂತು ಮಾಡಿ ಇಂಗು ತುಂಬಿ ಮರ ಕ್ರಮೇಣ ತಾನಾಗಿಯೇ ಒಣಗಿ ಸಾಯುವಂತೆ ಮಾಡುವ ಕೆಟ್ಟ ಸಂಪ್ರದಾಯ ಆರಂಭವಾಗಿದೆ ಎಂದು ಧರಣಿ ನಿರತರು ಕೆಂಡ ಕಾರಿದರು.

ಈಗ ಕಡಿತಲೆಗೆ ನೆಲಕ್ಕುರುಳಿದ ಮರಗಳನ್ನು ತಾವು 2009ರಲ್ಲಿ ನೆಟ್ಟಿದ್ದು, ನಿಯಮಿತವಾಗಿ ಆರೈಕೆ ಮಾಡಿದ್ದರ ಫಲವಾಗಿ ಈಗ ಅತ್ಯಂತ ಸುಂದರವಾಗಿ ಬೆಳೆದು ನಿಂತಿದ್ದವು. ಆದರೆ ರಾತ್ರಿ ದುರುಳರು ಇವುಗಳಿಗೆ ಗರಗಸ ಹಚ್ಚಿ ನೆಲಕ್ಕುರುಳಿಸಿದ್ದಾರೆ. ಒಂದು ಮರವನ್ನು ಗರಗಸದಿಂದ ಅರ್ಧ ಮಾತ್ರ ಕತ್ತರಿಸಿ ಹಾಗೇ ಬಿಟ್ಟು ಹೋಗಿದಗದಾರೆ. ಯಾವುದೇ ಸಮಯದಲ್ಲಿ ಬೀಳುವ ಅಪಾಯವಿದೆ. ನಮ್ಮ ಪ್ರಕಾರ ಈ ಮರಗಳ ಕೊಲೆಯಾಗಿದೆ. ತಪ್ಪಿತಸ್ಥರನ್ನು ಹುಡುಕಿ ಶಿಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದಲ್ಲಿರುವ ಮರಗಳನ್ನು ಗುರುತಿಸಿ ಜಿಯೋ ಟ್ಯಾಗ್ ಮಾಡಬೇಕು. ಮರಗಳ್ಳರಿಗೆ ದುಪ್ಪಟ್ಟು ದಂಡ, ಕಾರಾಗ್ರಹ ಸಜೆ ವಿಧಿಸಬೇಕು ಎಂದು ಒತ್ತಾಯಿಸಿದರು. ಒಂದು ಹಂತದಲ್ಲಿ ಅರಣ್ಯ, ನಗರಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವ ವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಪರಿಸರ ಪ್ರಿಯರು ಪಟ್ಟುಹಿಡಿದು ಕಳಿತರು.

ಬಳಿಕ ನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಧರಣಿ ಸ್ಥಳಕ್ಕೆ ಆಗಮಿಸಿ, ಮರಕಡಿತಲೆಗೆ ನನ್ನ ತೀವ್ರ ವಿರೋಧವಿದೆ. ಮರ ಗಿಡ ಸಂರಕ್ಷಿಸಿ ಪರಿಸರ ಉಳಿವಿಗೆ ಸಾರ್ವಜನಿಕರೊಂದಿಗೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.

ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಕಡಿತಲೆ ಮರಗಳನ್ನು ವೀಕ್ಷಿಸಿ, ಸಿಸಿ ಫೂಟೇಜ್‌ಗಳನ್ನು ನೋಡಿ ಕಡಿತಲೆ ಮಾಡಿದವರು ಯಾರು ಎಂಬುದನ್ನು ಶೋಧಿಸುತ್ತೇವೆ. ಈ ಮರ ಕಡಿತಲೆಗೆ ಸಂಬಂಧಿಸಿ ಸುಮೊಟೋ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದರು. ಅಪರಾಧಿಗಳನ್ನು ಹಿಡಿದೇ ತೀರುತ್ತೇವೆ. ನಗರದಲ್ಲಿ ಪರಿಸರ ಸಂರಕ್ಷಣೆಗೆ ಅರಣ್ಯ ಸಮಿತಿಯನ್ನು ಇನ್ನಷ್ಟು ಸಕ್ರೀಯಗೊಳಿಸುತ್ತೇವೆ. ಗಿಡ-ಮರಗಳ ಮೇಲೆ ನಿರಂತರ ನಿಗಾ ಇಟ್ಟು ಅವುಗಳನ್ನು ಸಂರಕ್ಷಿಸುವ ಕಾರ್ಯ ಮುಂದುವರಿಸುತ್ತೇವೆ. ಇನ್ನೊಂದು ವಾರದ ಒಳಗಾಗಿ ದುಷ್ಕರ್ಮಿಗಳನ್ನು ಹಿಡಿಯುತ್ತೇವೆ ಎಂಬ ಭರವಸೆಯ ಬಳಿಕ ಧರಣಿ ನಿರತರು ತಮ್ಮ ಧರಣಿಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಪರಿಸರಪ್ರಿಯ ಪ್ರಮುಖರಾದ ತ್ಯಾಗರಾಜ ಮಿತ್ಯಾಂತ, ಡಾ.ಬಾಲಕೃಷ್ಣ ಹೆಗಡೆ, ಡಾ. ಶೇಖರ್ ಗೌಳೇರ್, ಬಾಲಕೃಷ್ಣ ನಾಯ್ಡು, ಎಸ್.ಬಿ.ಅಶೋಕ್ ಕುಮಾರ್, ಗಜನನ ಸಭಾಹಿತ, ನಾಗರಾಜ್ ಶೆಟ್ಟರ್, ಅನಿಲ್ ಹೆಗ್ಡೆ, ಬಾಲಾಜಿ ದೇಶಪಾಂಡೆ, ಶಿವಕುಮಾರ ಮೈಲಾರ, ಅಧಿಕಾರಿಗಳಾದ ಡಿಆರ್‌ಎಫ್‌ಒ ನರೇಂದ್ರ, ಕೋಟೆ ಪೋಲಿಸ್ ಠಾಣೆ ಡಿಎಸ್‌ಪಿ ಸಂಜೀವ ಕುಮಾರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *